ಕೇರಳ: ಪಟಾಕಿ ತಯಾರಿಕಾ ಕಟ್ಟಡದಲ್ಲಿ ಸ್ಫೋಟ: 13 ಮಂದಿ ಮೃತ್ಯು, ಹಲವರು ಗಾಯ
ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ನಲ್ಲಿ ಪಟಾಕಿ ತಯಾರಿಕಾ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಫೋಟದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 70 ಮಂದಿ ಇದ್ದರೆಂದು ಹೇಳಲಾಗಿದೆ. ಅವರೆಲ್ಲರಿಗೂ ಸುಟ್ಟ ಗಾಯಗಳಾಗಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ.
ತಿರುವಂಬಾಡಿ ದೇವಸ್ಥಾನದಲ್ಲಿ ಕೆಲವೇ ದಿನಗಳಲ್ಲಿ ನಡೆಯಬೇಕಾಗಿದ್ದ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ‘ತ್ರಿಶೂರ್ ಪೂರಂ’ ಎಂಬ ಹೆಸರಿನ ಜಾತ್ರೆ ಎಪ್ರಿಲ್ 26ರಂದು ನಡೆಯಲಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಸ್ಫೋಟವು ಅಪರಾಹ್ನ ಸುಮಾರು 3:30ಕ್ಕೆ ಸಂಭವಿಸಿದ್ದು, ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿತು. ಅಲ್ಲಿ ಬಳಿಕ ಹಲವು ಸಣ್ಣ ಸ್ಫೋಟಗಳ ಸದ್ದು ಕೇಳಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು.
ಭತ್ತದ ಗದ್ದೆಗಳ ನಡುವಿನ ಸ್ಥಳವೊಂದರಲ್ಲಿ ನಿರ್ಮಿಸಲಾಗಿರುವ ಹಲವು ತಾತ್ಕಾಲಿಕ ಶೆಡ್‌ಗಳಲ್ಲಿ ದೇವಸ್ಥಾನಕ್ಕಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಸುಮಾರು 2,000 ಕೆಜಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿಡಲಾಗಿತ್ತು ಎನ್ನಲಾಗಿದೆ.
ಶೆಡ್‌ನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತೀವ್ರ ಬಿಸಿಲು ಈ ಘಟನೆಗೆ ಒಂದು ಕಾರಣ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಫೋಟದ ಸದ್ದು ಹಲವು ಕಿಲೋಮೀಟರ್ ದೂರದಲ್ಲೂ ಕೇಳಿಸಿದ್ದು, ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ.





