ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಯುವಕ ಸಾವು
ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆಯೊಂದು ಯುವಕನ ಗಂಟಲಲ್ಲಿ ಸಿಲುಕಿದ ಪರಿಣಾಮ 21 ವರ್ಷದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ಚೆನ್ನಹಳ್ಳಿ ಗ್ರಾಮದ ನಿವಾಸಿ ಸಚಿನ್ (21) ಎಂದು ಗುರುತಿಸಲಾಗಿದೆ. ಗುರುವಾರ (ಏಪ್ರಿಲ್ 17) ರಾತ್ರಿ ಗ್ರಾಮಸ್ಥರೊಬ್ಬರ ಜನ್ಮದಿನದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಗೆಳೆಯರಿಗೆ ನಾನ್-ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.
ಊಟ ಮುಗಿಸಿದ ನಂತರ ಸಚಿನ್ ಅದೇ ಕಟ್ಟಡದ ಒಳಗೆ ವಿಶ್ರಾಂತಿಗೆ ತೆರಳಿದ್ದನು. ಪಾರ್ಟಿ ಮುಗಿಸಿ ಉಳಿದವರೆಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದು, ಸಚಿನ್ ಅಲ್ಲಿಯೇ ಉಳಿದುಕೊಂಡಿದ್ದನು. ಶುಕ್ರವಾರ (ಏಪ್ರಿಲ್ 18) ಬೆಳಿಗ್ಗೆ ಕಾಮಗಾರಿ ಮುಂದುವರಿಸಲು ಕಾರ್ಮಿಕರು ಕಟ್ಟಡದ ಬಳಿ ಬಂದಾಗ ಸಚಿನ್ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.
ತಕ್ಷಣ ಕುಟುಂಬಸ್ಥರು ಆತನನ್ನು ಶಿವಮೊಗ್ಗಕ್ಕೆ ಕೊಂಡೊಯ್ದರಾದರೂ, ಆತ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ.




