ವಿಟ್ಲ: ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಸುಡುಮದ್ದು ತಯಾರಿಕೆ: ಆರೋಪಿ ಬಂಧನ
ವಿಟ್ಲ: ಠಾಣಾ ವ್ಯಾಪ್ತಿಯ ಕಂಬಳಬೆಟ್ಟು ಸಮೀಪದ ಅಮೈ ಎಂಬಲ್ಲಿ ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಸುಡುಮದ್ದು ತಯಾರಿಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 13-04-2026 ರಂದು ರಾತ್ರಿ, ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಎಂಬವರು ತಮ್ಮ ಮನೆಯ ಆವರಣದಲ್ಲಿ ಸುಡುಮದ್ದು ತಯಾರಿಗೆ ಬೇಕಾದ ಸ್ಫೋಟಕ ಸಾಮಗ್ರಿಗಳನ್ನು ಶೇಖರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ನೇತೃತ್ವದ ತಂಡ ದಾಳಿ ನಡೆಸಿದೆ.
ಸ್ಥಳ ಪರಿಶೀಲನೆ ವೇಳೆ ಸುಮಾರು 1.9 ಕೆ.ಜಿ ಯಷ್ಟು ಸ್ಫೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ. ಕೂಡಲೇ ಆರೋಪಿ ಜಗದೀಶ ಪೂಜಾರಿಯನ್ನು ವಶಕ್ಕೆ ಪಡೆದ ಪೊಲೀಸರು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 93/2026 ಕಲಂ: 9B Explosive Act 1884, ಕಲಂ: 5 Explosive Substances Act 1908, ಹಾಗೂ ಕಲಂ: 288 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




