ನದಿಗೆ ಸುಮಾರು 11 ಸಾವಿರ ಲೀಟರ್ ಹಾಲನ್ನು ಸುರಿದ ಭಕ್ತರು: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಭೂಪಾಲ್: ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯಲ್ಲಿ ಭಕ್ತರು ತಮ್ಮ ಹರಕೆ ಈಡೇರಿದ ಹಿನ್ನೆಲೆಯಲ್ಲಿ ನರ್ಮದಾ ನದಿಗೆ ಸುಮಾರು 11,000 ಲೀಟರ್ ಹಾಲನ್ನು ನೇರವಾಗಿ ಸುರಿದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಸೀಹೋರ್ ಜಿಲ್ಲೆಯ ಭೇರುಂದಾ ತಾಲೂಕಿನ ಪಾತಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಳೆದ 21 ದಿನಗಳಿಂದ ವಿಶೇಷ ಮಹಾಯಜ್ಞ ನಡೆಯುತ್ತಿತ್ತು. ಈ ಯಜ್ಞದ ಸಮಾರೋಪದ ಅಂಗವಾಗಿ ಮತ್ತು ಭಕ್ತರ ಹರಕೆ ಪೂರೈಸುವ ಸಲುವಾಗಿ ಬುಧವಾರದಂದು ನರ್ಮದಾ ನದಿಗೆ ಬೃಹತ್ ಪ್ರಮಾಣದ ‘ದುಗ್ಧಾಭಿಷೇಕ’ ಆಯೋಜಿಸಲಾಗಿತ್ತು. ಟ್ಯಾಂಕರ್ ಮೂಲಕ ಸಾವಿರಾರು ಲೀಟರ್ ಹಾಲನ್ನು ನದಿಗೆ ಹರಿಸಲಾಗಿದ್ದು, ಈ ವೇಳೆ ನರ್ಮದಾ ನದಿಯ ನೀರು ಕೆಲಕಾಲ ಸಂಪೂರ್ಣ ಬಿಳಿ ಬಣ್ಣಕ್ಕೆ ತಿರುಗಿತ್ತು.
ಅಂದಾಜಿನ ಪ್ರಕಾರ, ನದಿಗೆ ಸುರಿಯಲಾದ 11,000 ಲೀಟರ್ ಹಾಲಿನ ಮಾರುಕಟ್ಟೆ ಮೌಲ್ಯ ಸುಮಾರು 5.5 ಲಕ್ಷದಿಂದ 7.7 ಲಕ್ಷ ರೂಪಾಯಿಗಳು ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಾಲನ್ನು ವ್ಯರ್ಥ ಮಾಡುವ ಬದಲು ಬಡ ಮಕ್ಕಳಿಗೆ ಅಥವಾ ಅನಾಥಾಶ್ರಮಗಳಿಗೆ ಹಂಚಬಹುದಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.




