ಪ್ರೇಯಸಿ ಆತ್ಮಹತ್ಯೆ: ಮನನೊಂದ ಪ್ರಿಯಕರನೂ ಆತ್ಮಹತ್ಯೆ
ಬಾಗಲಕೋಟೆ: ಸಣ್ಣದೊಂದು ಮನಸ್ತಾಪಕ್ಕೆ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಮನನೊಂದ ಪ್ರಿಯಕರನೂ ಸಾವಿನ ಹಾದಿ ಹಿಡಿದಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನಲ್ಲಿ ಸಂಭವಿಸಿದೆ.
ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿ ಪವಿತ್ರಾ ಒಂಟಿ (19) ಹಾಗೂ ಅಸ್ಕಿ ಗ್ರಾಮದ ಕಾರ್ತಿಕ್ ನಾಯಕ್ (19) ಮೃತಪಟ್ಟ ದುರ್ದೈವಿಗಳು. ಮಂಗಳವಾರ ಸಂಜೆ ಸಂಭವಿಸಿದ ಈ ಅವಳಿ ಸಾವುಗಳು ಇಡೀ ತಾಲೂಕನ್ನು ಕಂಗೆಡಿಸಿವೆ.
ಪರಸ್ಪರ ಪ್ರೀತಿಸುತ್ತಿದ್ದ ಪವಿತ್ರಾ ಮತ್ತು ಕಾರ್ತಿಕ್ ನಡುವೆ ಮಂಗಳವಾರ ಯಾವುದೋ ವಿಷಯವಾಗಿ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ವೈಮನಸ್ಸಿನಿಂದ ತೀವ್ರವಾಗಿ ನೊಂದ ಪವಿತ್ರಾ, ಮಂಗಳವಾರ ಸಂಜೆ ಬನಹಟ್ಟಿಯ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪವಿತ್ರಾ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ತಿಕ್ ಬುಧವಾರ ಮುಂಜಾನೆ ತನ್ನ ಗ್ರಾಮವಾದ ಅಸ್ಕಿಯಲ್ಲಿ ನೇಣು ಹಾಕಿಕೊಂಡು ಜೀವನ ಅಂತ್ಯಗೊಳಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಬನಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




