April 6, 2026

ಮಡಿಕೇರಿ: ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಯುವತಿ ಸುರಕ್ಷಿತ: 72 ಗಂಟೆಗಳ ನಂತರ ಶರಣ್ಯ ಪತ್ತೆ

0
image_editor_output_image-686572681-1775455650031.jpg

ಮಡಿಕೇರಿ: ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದ ದಟ್ಟಾರಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಶರಣ್ಯ (36) ಅವರು ಭಾನುವಾರ ಬೆಳಿಗ್ಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಈ ಮೂಲಕ ಅರಣ್ಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯರು ನಡೆಸುತ್ತಿದ್ದ 72 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಯಶಸ್ವಿಯಾಗಿ ಅಂತ್ಯಗೊಂಡಿದೆ.
ಕೇರಳದ ಕೊಚ್ಚಿಯ ನಾದನಾಪುರ ಗ್ರಾಮದ ನಿವಾಸಿ, ಗೋಪಿ ಮತ್ತು ಶೈಲಜಾ ದಂಪತಿಯ ಪುತ್ರಿ ಶರಣ್ಯ ಕಳೆದ 15 ವರ್ಷಗಳಿಂದ ದೇಶದ ವಿವಿಧೆಡೆ ಚಾರಣ (Trekking) ಮಾಡಿದ ಅನುಭವ ಹೊಂದಿದ್ದಾರೆ.

ಏಪ್ರಿಲ್ 2 ರಂದು ಅವರು ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಒಬ್ಬರೇ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ವಾಪಸ್ ಬರುವಾಗ ದಾರಿ ತಪ್ಪಿ ದಟ್ಟಾರಣ್ಯದೊಳಗೆ ಸಿಲುಕಿಕೊಂಡಿದ್ದರು.

ದಾರಿ ತಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಅವರು ತಾವು ತಂಗಿದ್ದ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ದುರದೃಷ್ಟವಶಾತ್ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಶರಣ್ಯ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರ ತಂಡಗಳು ಹಗಲಿರುಳು ಶ್ರಮಿಸಿದವು.

ಕಾಡಿನೊಳಗೆ ನಕ್ಸಲ್ ನಿಗ್ರಹ ಪಡೆ ಕೂಡ ಕಾರ್ಯಾಚರಣೆಗೆ ಇಳಿದಿತ್ತು. ದಟ್ಟವಾದ ಕಾಡಿನಲ್ಲಿ ಮನುಷ್ಯರು ತಲುಪಲು ಸಾಧ್ಯವಾಗದ ಜಾಗಗಳಲ್ಲಿ ಹುಡುಕಾಟ ನಡೆಸಲು ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಿಕೊಳ್ಳಲಾಗಿತ್ತು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆಯಂತೆ ಕಾರ್ಯಾಚರಣೆ ತೀವ್ರಗೊಂಡಿತ್ತು. ಶರಣ್ಯ ಪತ್ತೆಗಾಗಿ ನಕ್ಸಲ್ ನಿಗ್ರಹ ಪಡೆ (ANF), ಶ್ವಾನದಳ ಹಾಗೂ ಅತ್ಯಾಧುನಿಕ ಥರ್ಮಲ್ ಡ್ರೋಣ್‌ಗಳನ್ನು ಬಳಸಲಾಗಿತ್ತು. ಇಂದು ಬೆಳಿಗ್ಗೆ ಬೆಟ್ಟದ ತಪ್ಪಲಿನ ದಟ್ಟ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಶೋಧ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ.

15 ವರ್ಷಗಳ ಚಾರಣದ ಅನುಭವವಿದ್ದ ಕಾರಣ ಅವರು ಕಾಡಿನ ವಿಷಮ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ ಬದುಕುಳಿದಿದ್ದಾರೆ. ಸದ್ಯ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!