April 5, 2026

ಬಂಟ್ವಾಳ: ಗಾಂಜಾ ಮಾರಾಟ ಸಾಬೀತು: ಆರೋಪಿಗೆ 7 ವರ್ಷ ಕಾರಾಗೃಹ ಶಿಕ್ಷೆ, 70,000 ರೂ. ದಂಡ

0
image_editor_output_image1563821543-1775377383357.jpg

ಬಂಟ್ವಾಳ: ಸುಮಾರು ನಾಲ್ಕು ವರ್ಷಗಳ ಹಿಂದಿನ ಗಾಂಜಾ ಮಾರಾಟ ಪ್ರಕರಣಕ್ಕೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹70,000 ದಂಡ ವಿಧಿಸಿದೆ.

ಈ ಪ್ರಕರಣದ ಆರೋಪಿ ಮಂಗಳೂರು ಬಂದರು ನಿವಾಸಿ ಟಿ.ಪಿ. ಫಾರೂಕ್ (50) ಎಂದು ಗುರುತಿಸಲಾಗಿದೆ. ಎರಡನೇ ಆರೋಪಿಯಾಗಿರುವ ಸಾಗರ್ ಸಿಂಗ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ.

2020ರ ನವೆಂಬರ್ 10ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಮೇಲ್ಕಾರ್ ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ, ಆಗಿನ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ₹49,000 ಮೌಲ್ಯದ ಸುಮಾರು 1.480 ಕೆ.ಜಿ. ಗಾಂಜಾ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಕ್ರೈಂ ನಂ. 126/2020ರಂತೆ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಆಗಿನ ವೃತ್ತ ನಿರೀಕ್ಷಕರಾದ ಟಿ.ಡಿ. ನಾಗರಾಜ್ ನಡೆಸಿ, ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್ ಅವರು ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ಆರೋಪಿ ಟಿ.ಪಿ. ಫಾರೂಕ್ ಅವರನ್ನು ದೋಷಿ ಎಂದು ಘೋಷಿಸಿ 7 ವರ್ಷಗಳ ಶಿಕ್ಷೆ ಹಾಗೂ ₹70,000 ದಂಡ ವಿಧಿಸಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜೂಡಿತಾ ಅವರು ಪರಿಣಾಮಕಾರಿ ವಾದ ಮಂಡಿಸಿ ಆರೋಪಿಯ ವಿರುದ್ಧದ ಆರೋಪಗಳನ್ನು ದೃಢಪಡಿಸಿದರು.

Leave a Reply

Your email address will not be published. Required fields are marked *

error: Content is protected !!