ಕುಂದಾಪುರ: ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ: ಯುವ ಎಂಜಿನಿಯರ್ ಮೃತ್ಯು
ಕುಂದಾಪುರ: ಉದ್ಯೋಗದ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲ್ಲೂಕಿನ ಯುವ ಎಂಜಿನಿಯರ್ ಒಬ್ಬರು ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ಭಾನುವಾರ ಸಂಭವಿಸಿದೆ.
ಬೈಂದೂರು ತಾಲ್ಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತ ದುರ್ದೈವಿ.
ಎಂಜಿನಿಯರಿಂಗ್ ಪದವೀಧರರಾಗಿದ್ದ ಅಕ್ಷಯ್, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಸದ್ಯ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ನಿರ್ವಹಿಸುತ್ತಿದ್ದ ಅವರು, ಕಚೇರಿಯ ಕೆಲಸದ ನಿಮಿತ್ತ ತಿಂಗಳಿಗೊಮ್ಮೆ ಬೆಂಗಳೂರಿಗೆ ತೆರಳುತ್ತಿದ್ದರು.
ಅದರಂತೆ ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ತಮ್ಮ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಅಕ್ಷಯ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




