November 16, 2026

ಪುಂಜಾಲಕಟ್ಟೆ: ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ; ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ: ಶಾಸಕ ಹರೀಶ್ ಪೂಂಜ

0
image_editor_output_image286581312-1794806663913

ಬೆಳ್ತಂಗಡಿ: ಶಾಲೆಯೊಂದರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ರಾಜಕೀಯ ಭಾಷಣ ಮಾಡಿರುವುದಲ್ಲದೆ, ಶಾಲಾ ವಿದ್ಯಾರ್ಥಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಕಾರ ಕೂಗಿಸಿರುವ ಘಟನೆ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಪುಂಜಾಲಕಟ್ಟೆಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೆರವಾದ ಖಾಸಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶಾಸಕರು ಈ ರೀತಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ‘‘ನಿಮ್ಮ ಶಾಲೆಗೆ ಒಂದು ರೂಪಾಯಿ ಸಹಾಯ ಮಾಡದ ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ. ಅವರು ದೂರು ನೀಡಿ ಇಲ್ಲಿನ ಶಿಕ್ಷಕರಿಗೆ ಚಿತ್ರಹಿಂಸೆ ನೀಡಿ, ಶಾಲೆಯ ಕಾರ್ಯಕ್ರಮವನ್ನೇ ಬದಲಾಯಿಸಿದ್ದಾರೆ. ಇಂತಹ ಪಕ್ಷವನ್ನು ನೀವು ನಂಬಿ ಹೋಗಬೇಡಿ. ದೇಶ ಇರುವುದು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ’’ ಎಂದು ಹೇಳಿದ್ದಾರೆ.

ಅಲ್ಲದೆ, ಭಾಷಣದ ಕೊನೆಯಲ್ಲಿ ‘ಭಾರತ್ ಮಾತಾಕೀ ಜೈ’ ಘೋಷಣೆ ಕೂಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ‘ನರೇಂದ್ರ ಮೋದಿ ಅವರಿಗೆ ಜಯವಾಗಲಿ’ ಎಂದು ಜಯಕಾರ ಹಾಕಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಪುಂಜಾಲಕಟ್ಟೆ ಶಾಲೆಯಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸಭಾಭವನದ ಉದ್ಘಾಟನೆಗೆ ಈ ಮೊದಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಸರ್ಕಾರಿ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿ ಹಾಗೂ ನಿಯಮಗಳಿಗೆ ವಿರುದ್ಧವಾಗಿ ಉದ್ಘಾಟನೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ದೂರು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಭಾಭವನದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು ಎನ್ನಲಾಗಿದೆ. ಶೈಕ್ಷಣಿಕ ವೇದಿಕೆಯಲ್ಲಿ ಶಾಸಕರು ರಾಜಕೀಯ ಟೀಕೆ ಮಾಡಿರುವುದು ಹಾಗೂ ಶಾಲಾ ಮಕ್ಕಳಿಂದ ರಾಜಕೀಯ ನಾಯಕರಿಗೆ ಜಯಕಾರ ಕೂಗಿಸಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಪರ–ವಿರೋಧ ಚರ್ಚೆಗಳು ಆರಂಭವಾಗಿವೆ.

Leave a Reply

Your email address will not be published. Required fields are marked *

error: Content is protected !!