ಮಂಡ್ಯ: ರೈಲು ಢಿಕ್ಕಿ ಹೊಡೆದು ಯುವತಿ ದಾರುಣ ಸಾವು
ಮಂಡ್ಯ: ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ಹಳಿ ದಾಟಲು ಯತ್ನಿಸಿದ 19 ವರ್ಷದ ಯುವತಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ನಿವಾಸಿ ಲಿಖಿತಾ (19) ಮೃತ ದುರ್ದೈವಿ. ಚಂದಗಿರಿಕೊಪ್ಪಲು ಗ್ರಾಮದ ಸಮೀಪವಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಬರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೇಟ್ ಹಾಕಲಾಗಿತ್ತು.
ಆದರೆ ಗೇಟ್ ತೆರೆಯುವವರೆಗೆ ಕಾಯಲು ಸಿದ್ಧಳಿಲ್ಲದ ಲಿಖಿತಾ, ಗೇಟ್ ಇದ್ದರೂ ಅದರ ಕೆಳಗೆ ಅಥವಾ ಅಕ್ಕಪಕ್ಕದಿಂದ ಹಳಿ ದಾಟಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ವೇಗವಾಗಿ ಬಂದ ರೈಲು ಆಕೆಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ತೀವ್ರತೆಗೆ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ದೇಹ ಛಿದ್ರಗೊಂಡಿದೆ. ಈ ಸಂಪೂರ್ಣ ದೃಶ್ಯಗಳು ಸ್ಥಳದಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಣ್ಣೆದುರೇ ಮಗಳನ್ನು ಕಳೆದುಕೊಂಡು ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲ್ವೆ ಹಳಿ ದಾಟುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.




