ಉಡುಪಿ: ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳ ಗಡಿಪಾರು
ಉಡುಪಿ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಜಿಲ್ಲೆಯಿಂದ ನಿರ್ದಿಷ್ಟ ಅವಧಿಗೆ ಗಡಿಪಾರು ಮಾಡಿ ಏಪ್ರಿಲ್ 2ರಂದು ಉಡುಪಿ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿಯಾಗಿರುವ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಆದೇಶ ಹೊರಡಿಸಿದ್ದಾರೆ.
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ವಿಜೇತ ಮತ್ತು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರೀಫ್ ಸಾಹೇಬ್ ಗಡಿಪಾರಾದ ಆರೋಪಿಗಳು.
ಉದ್ಯಾವರ ಗ್ರಾಮದ ಪಿತ್ರೋಡಿ ನಿವಾಸಿಯಾದ ಆರೋಪಿ ವಿಜೇತನ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಈತನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಗಡಿಪಾರು ಮಾಡಲಾಗಿದೆ.
ಪಡುಬಿದ್ರಿ ಪೊಲೀಸ್ ವ್ಯಾಪ್ತಿಯ ಮುದರಂಗಡಿ ನಿವಾಸಿಯಾದ ಆರೋಪಿ ಆರೀಫ್ ಸಾಹೇಬ್ ವಿರುದ್ಧ ಕೊಲೆ ಯತ್ನ, ಹಲ್ಲೆ ಮತ್ತು ಮಾದಕ ವಸ್ತು ಸೇವನೆ ಸೇರಿದಂತೆ ಐದು ಪ್ರಕರಣಗಳಿವೆ. ಈತನ ವಿರುದ್ಧ ಈಗಾಗಲೇ ರೌಡಿಶೀಟ್ ತೆರೆಯಲಾಗಿತ್ತು. ಇದೀಗ ಈತನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಗಡಿಪಾರು ಮಾಡಲಾಗಿದೆ.
“ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವುದನ್ನು ತಡೆಯಲು ಈ ಕಠಿಣ ಕ್ರಮ ಅಗತ್ಯವಾಗಿತ್ತು. ಜಿಲ್ಲೆಯ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮಾಜವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.




