ಬಂಟ್ವಾಳ: ಮಕ್ಕಳ ಹೊಸ ಸೈಕಲ್‌ಗೆ ಗಾಳಿ ಹಾಕಿಸಲು ಹೋಗುತ್ತಿದ್ದಾಗ ವಾಹನ ಢಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಮೃತ್ಯು
ಬಂಟ್ವಾಳ: ಮಕ್ಕಳ ಮೇಲಿನ ಅತೀವ ಪ್ರೀತಿಯೇ ಆ ತಂದೆಯ ಪಾಲಿಗೆ ಮೃತ್ಯುವಾಗಿ ಬಂದೊದಗಿದ ಹೃದಯವಿದ್ರಾವಕ ಘಟನೆಯೊಂದು ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೈಕಂಬ ಸಮೀಪದ ಶಾಂತಿ ಅಂಗಡಿ ಎಂಬಲ್ಲಿ ಬುಧವಾರ ನಡೆದಿದೆ.
ಮಕ್ಕಳ ಹೊಸ ಸೈಕಲ್‌ಗೆ ಗಾಳಿ ಹಾಕಿಸಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೊಲೆರೊ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ ಪಿಂಟೊ (49) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಇವರು ಬಿ.ಸಿ.ರೋಡ್‌ನ ತಲಪಾಡಿಯಲ್ಲಿ ವಾಹನ ಪೇಂಟಿಂಗ್ ಕೆಲಸ ಮಾಡುತ್ತಿದ್ದರು.
ಮೃತ ಗಾಡ್ವಿನ್ ಅವರು ಮಂಗಳವಾರವಷ್ಟೇ ತಮ್ಮ ಇಬ್ಬರು ಪುತ್ರರಿಗಾಗಿ ಹೊಸ ಸೈಕಲ್ ಒಂದನ್ನು ಖರೀದಿಸಿ ತಂದಿದ್ದರು. ಸೈಕಲ್ ಟೈರ್‌ನಲ್ಲಿ ಗಾಳಿ ಕಡಿಮೆಯಿದ್ದ ಕಾರಣ, ಮಧ್ಯಾಹ್ನ ಅದನ್ನು ಸಮೀಪದ ಸೈಕಲ್ ಅಂಗಡಿಗೆ ತಳ್ಳಿಕೊಂಡು ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬೊಲೆರೊ ಪಿಕಪ್ ವಾಹನವು ರಸ್ತೆ ಬದಿಯಲ್ಲಿದ್ದ ಗಾಡ್ವಿನ್ ಅವರಿಗೆ ಬಲವಾಗಿ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಗಾಡ್ವಿನ್ ಅವರು ರಸ್ತೆಗೆ ಎಸೆಯಲ್ಪಟ್ಟು ಕೊನೆಯುಸಿರೆಳೆದಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಗಾಡ್ವಿನ್ ಅವರ ಸಾವು ಸ್ಥಳೀಯರಲ್ಲಿ ತೀವ್ರ ಶೋಕ ತಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.




