ಪಾಣೆಮಂಗಳೂರು: ಗ್ಯಾಸ್ ಪಂಪ್ ಏಜೆನ್ಸಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಗೆ ನುಗ್ಗಿದ ಅಟೊರಿಕ್ಷಾ ಚಾಲಕ ಸಜಿಪಮೂಡಾ, ಬಂಟ್ವಾಳ ನಿವಾಸಿ ಅಫ್ರೀಝ್ (28) ಎಂಬಾತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕಚೇರಿಯ ಸೊತ್ತುಗಳನ್ನು ಹಾನಿಗೊಳಿಸಿರುವ ಘಟನೆ ಮಾರ್ಚ್ 20ರಂದು ಸಂಜೆ ನಡೆದಿದೆ.
ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕುನಲ್ ಭುಹ್ನಿಯಾ (27) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಕೆಎ 19 ಎಸಿ 2102 ನೊಂದಾವಣಿ ಸಂಖ್ಯೆಯ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದ ಚಾಲಕನು, ಏಜೆನ್ಸಿಯ ಒಳಗೆ ಪ್ರವೇಶಿಸಿ ಕಚೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಅಶ್ವಿನ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿ, ನಂತರ ಕಚೇರಿಯ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳನ್ನು ಜಖಂಗೊಳಿಸಿದ್ದಾನೆ. ಈ ಕೃತ್ಯದಿಂದ ಸುಮಾರು 48,000/- ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಟೋ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳು ಸೇರಿದಂತೆ ಕಲಂ 115(2): ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು. ಕಲಂ 287: ಸಾರ್ವಜನಿಕ ಸುರಕ್ಷತೆಗೆ ಧಕ್ಕೆ. ಕಲಂ 324(4): ಆಸ್ತಿಪಾಸ್ತಿಗೆ ಹಾನಿ ಮಾಡುವುದು. ಕಲಂ 351(2) & 352: ಅಪರಾಧಿಕ ಬೆದರಿಕೆ ಮತ್ತು ಹಲ್ಲೆ. ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ:
ಪ್ರಸ್ತುತ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಆಟೋ ಚಾಲಕ ಏಜೆನ್ಸಿಯ ಆವರಣದಲ್ಲಿ ರಂಪಾಟ ಮಾಡುತ್ತಿರುವ ವೀಡಿಯೊ ಈಗ ಲಭ್ಯವಾಗಿದ್ದು, ತನಿಖೆಗೆ ಪೂರಕವಾಗಿದೆ.




