ಕಡಬ: ತಲೆನೋವಿಗೆಂದು ಔಷಧ ಸೇವಿಸಿದ್ದ 10 ವರ್ಷದ ಬಾಲಕ ಮೃತ್ಯು
ಬಂಟ್ವಾಳ: ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಸೇವಿಸಿದ್ದ 10 ವರ್ಷದ ಬಾಲಕ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ಮಾ. 18ರ ಸಂಜೆ ಸಂಭವಿಸಿದೆ.
ಕೊಂಡ್ಯಾಡಿ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ರಾಮಕುಂಜದ ಖಾಸಗಿ ಶಾಲಾ 5ನೇ ತರಗತಿ ವಿದ್ಯಾರ್ಥಿ ಚಿರಾಗ್ ಎಸ್. (10) ಮೃತ ದುರ್ದೈವಿ.
ಬಾಲಕನಿಗೆ ಪದೇ ಪದೆ ತಲೆನೋವು ಕಾಣಿಸಿಕೊಳ್ಳುತ್ತಿದ್ದು, ಮಾ. 18 ರಂದು ಸಂಜೆ ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಕುಡಿದಿದ್ದ. ಬಳಿಕ ಮನೆಯಲ್ಲಿ ಬಾಲಕ ಹೊರಳಾಡುತ್ತಿರುವುದನ್ನು ಕಂಡ ಬಾಲಕನ ತಾಯಿ ಕೂಡಲೇ ತನ್ನ ಪತಿಗೆ ತಿಳಿಸಿದ್ದಾರೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಸಂಜೀವ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ




