ವಿಟ್ಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ: ಎರಡು ಲಾರಿಗಳು ವಶಕ್ಕೆ
ವಿಟ್ಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಧ್ಯಾಹ್ನ, ವಿಟ್ಲ ಪೊಲೀಸ್ ಠಾಣೆಯ ಎಸೈ ರಾಮಕೃಷ್ಣ ಅವರಿಗೆ ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಬಂಟ್ವಾಳ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಎರಡು ಲಾರಿಗಳನ್ನು ತಡೆದು, ಲಾರಿ ಚಾಲಕನನ್ನು ವಿಚಾರಿಸಲಾಗಿತ್ತು. ವಿಟ್ಲ ನಿವಾಸಿ ಸಾಧಿಕ್ (25) ಹಾಗೂ ವಿಟ್ಲ ನಿವಾಸಿ ಮೊಹಮ್ಮದ್ (46) ವಿಚಾರಿಸಿದಾಗ ಕೆಂಪು ಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ತುಂಬಿಸಿ ಕಳುಹಿಸಿಕೊಟ್ಟಿರುವುದಾಗಿ ಹಾಗೂ ಈ ಬಗ್ಗೆ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಇರುವುದಿಲ್ಲ ಎಂಬುದಾಗಿ ಪರಿಶೀಲನೆಯ ವೇಳೆ ತಿಳಿದುಬಂದಿರುತ್ತದೆ.
ಮುಂದಿನ ಕಾನೂನುಕ್ರಮಕ್ಕಾಗಿ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತವಾಗಿ ಲಾರಿಗಳನ್ನು ಸ್ವಾಧೀನಪಡಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2026, ಕಲಂ: 303(2) BNS 2023, ಕಲಂ. 4(1), 21 MMDR (MINES AND MINERALS REGULATION OF DEVELOPMENT) ACT 1957, ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




