ಬಡವರ ಬಾಯಿಹುಣ್ಣಿಗೆ ಶ್ರೀಮಂತರ ಉಪ್ಪುನೀರು: ರಾಧಾಕೃಷ್ಣ ಎರುಂಬು
ಸಮಯ ಸಾಧಕರು ಹಲವರು, ಮಾರ್ಜಾಲದಂತೆ.ಇಲಿಯಂತೆ ಹುಟ್ಟಿದ ತಪ್ಪಿಗೆ ಬಿಲದೊಳಗೆ ಅಡಗಿಯೇ ಇರಬೇಕಾದ ದೌರ್ಭಾಗ್ಯ ಇನ್ನು ಕೆಲವರದ್ದು. ಪೂರ್ವಕರ್ಮದ ಫಲದಿಂದಾಗಿ ಆದ ಆಕಸ್ಮಿಕ ಹುಟ್ಟು ಮನುಷ್ಯನ ಸ್ವಭಾವಕ್ಕೆ ಮುಳುವಾಗಿಯೂ, ಕೆಲವರಿಗೆ ಹಾಸಿಗೆಯಾಗಿಯೂ ಮಂಟಪವಾಗುತ್ತದೆ. ಅವಕಾಶಗಳ ಬಾಗಿಲು ಕೆಲವರಿಗೆ ಸ್ವಯಂ ತೆರೆದು, ಇನ್ನೂ ಕೆಲವರಿಗೆ ಬಾಗಿಲೇ ಕಾಣದು. ಒಬ್ಬನಿಗೆ ಪಥವೇ ಹೂಗಳಿಂದ ಹಾಸಿದರೆ, ಇನ್ನೊಬ್ಬನಿಗೆ ಮುಳ್ಳುಗಳೇ ಬದುಕಿನ ಅಕ್ಷರ. ಬಡವನ ಬೆವರು ಮಣ್ಣಿನಲ್ಲಿ ಬೆರೆತು ಮಣಿಯಾಗುತ್ತದೆ, ಶ್ರೀಮಂತನ ಮಾತು ಗಾಳಿಯಲ್ಲಿ ಹಾರಿದರೂ ಆದೇಶವಾಗುತ್ತದೆ.ಒಬ್ಬನು ಹೊತ್ತಿರುವ ನೋವು ನಿಸ್ಸಹಾಯ ಕಿರುಚಾಟವಾದರೆ, ಇನ್ನೊಬ್ಬನ ಸಣ್ಣ ಅಸಮಾಧಾನವೇ ಸುದ್ದಿಯಾಗುತ್ತದೆ. ಹುಟ್ಟಿನ ಅಂಕುಶದಲ್ಲಿ ಬಂಧಿತನಾದವನಿಗೆ ಹೋರಾಟವೇ ಬದುಕಿನ ಉಸಿರು. ಅನುಕೂಲದ ಅಂಚಿನಲ್ಲಿ ಬೆಳೆದವನಿಗೆ ಅಧಿಕಾರವೇ ಸ್ವಭಾವದ ನೆರಳು. ಆದರೆ, ಕಾಲದ ಚಕ್ರ ಸುತ್ತುತ್ತಲೇ ಇರುತ್ತದೆ—
ಇಂದು ಮಂಟಪವಾದುದು ನಾಳೆ ಮಣ್ಣಾಗಬಹುದು,ಇಂದು ಬಿಲವಾದುದು ನಾಳೆ ಬೆಳಕಾಗಬಹುದು.ಸತ್ಯದ ಮಣ್ಣು ಎಲ್ಲರಿಗೂ ಒಂದೇ,ಮರಣದ ಮೌನ ಎಲ್ಲರಿಗೂ ಸಮಾನ. ಹುಟ್ಟು ಎನ್ನುವುದು ಯಾರ ಆಯ್ಕೆ ಅಲ್ಲ, ಆದರೆ ಅದೇ ಕೆಲವರಿಗಾಗಿ ಆಭರಣ, ಇನ್ನೂ ಕೆಲವರಿಗಾಗಿ ಅಡಚಣೆ. ಒಬ್ಬನು ಸುವರ್ಣ ಚಮಚದೊಂದಿಗೆ ಬಾಯಿಗೆ ಹಾಲು ಸವಿದರೆ, ಮತ್ತೊಬ್ಬನು ಕಣ್ಣೀರನ್ನೇ ಮೊದಲ ಆಹಾರವನ್ನಾಗಿಸಿಕೊಳ್ಳುತ್ತಾನೆ. ಬಡವನ ಮನೆ ಮಣ್ಣಿನ ಗೋಡೆ,ಆದರೂ ಅದರೊಳಗಿನ ಪ್ರೀತಿ ಗಗನಕ್ಕಿಂತ ಎತ್ತರ. ಶ್ರೀಮಂತರ ಮನೆ ಮರ್ಮರದ ಮಂಟಪ,ಆದರೂ ಕೆಲವೊಮ್ಮೆ ಅದರೊಳಗೆ ಒಲವಿನ ಹನಿ ಕೊರತೆ. ಒಬ್ಬನಿಗೆ ಶಿಕ್ಷಣ ಅವಕಾಶವಾಗಿ ದೊರಕುತ್ತದೆ, ಇನ್ನೊಬ್ಬನಿಗೆ ಅದೇ ಕನಸಾಗಿ ಉಳಿಯುತ್ತದೆ.
ಒಬ್ಬನು ತಪ್ಪು ಮಾಡಿದರೆ “ಚಿಕ್ಕ ತಪ್ಪು” ಎನ್ನುತ್ತಾರೆ, ಇನ್ನೊಬ್ಬನು ತಪ್ಪೇಮಾಡದಿದ್ದರೂ “ಸಂದೇಹ” ಎನ್ನುತ್ತಾರೆ. ಸಮಾಜದ ತೂಕದ ಪಾತ್ರೆಯಲ್ಲಿ ಧನವೇ ಕೆಲವೊಮ್ಮೆ ಧರ್ಮವಾಗುತ್ತದೆ. ಹೆಸರಿನ ಭಾರದಿಂದ ಸತ್ಯ ಮಗ್ಗುಲಾಗುತ್ತದೆ, ಸ್ಥಾನದ ಹೊಳಪಿನಲ್ಲಿ ನ್ಯಾಯ ಕಣ್ಣಮುಚ್ಚುತ್ತದೆ.
ಬಡವನ ನೋವು ಮೌನದಲ್ಲಿ ಕರಗುತ್ತದೆ, ಸಿರಿವಂತರ ಅಸಮಾಧಾನವೇ ಸಭೆಯ ವಿಷಯವಾಗುತ್ತದೆ.ಬಡವನ ಬೆವರು ಬೆಲೆಯಿಲ್ಲದ ನೀರು,ಆದರೆ ಧನಿಕನ ಮಾತೇ ಮೌಲ್ಯದ ಮುದ್ರೆ.ಆದರೆ ಬದುಕಿನ ನಿಯಮ ಬೇರೆ.ಕಾಲವು ಯಾರಿಗೂ ಶಾಶ್ವತವಾಗಿ ಸೇರಿಲ್ಲ.ಇಂದು ಉನ್ನತ ಆಸನದಲ್ಲಿರುವವನು ನಾಳೆ ನೆಲದ ಮೇಲೆ ಕುಳಿತುಕೊಳ್ಳಬಹುದು. ಇಂದು ನೆಲದ ಮೇಲೆ ಹೋರಾಡುವವನು ನಾಳೆ ಬೆಳಕಿನ ವೇದಿಕೆಗೆ ಏರಬಹುದು. ಹುಟ್ಟು ವಿಭಿನ್ನವಾದರೂಹೃದಯದ ಬಡಿತ ಒಂದೇ.
ಹಸಿವು ಶ್ರೀಮಂತರಿಗೂ ಬರುತ್ತದೆ, ನೋವು ಬಡವರಿಗಷ್ಟೇ ಸೀಮಿತವಲ್ಲ.ಮರಣದ ಮುಂದೆ ಎಲ್ಲರೂ ಸಮಾನರು. ಅಲ್ಲಿ ಹಾಸಿಗೆ, ಮಂಟಪ, ಬಿಲ ಎನ್ನುವ ಭೇದವೇ ಇಲ್ಲ. ಹೀಗಾಗಿ,ಬಡವರ ಬಾಯಿಹುಣ್ಣಿಗೆ ಉಪ್ಪುನೀರು ಸುರಿಸುವ ಬದಲು,ಅವರ ಗಾಯಕ್ಕೆ ಔಷಧಿಯಾಗೋಣ.ಅವರ ಹೋರಾಟಕ್ಕೆ ಹಿತವಾಗೋಣ.
ಅವರ ಕನಸುಗಳಿಗೆ ಕಂಬವಾಗೋಣ. ಧನದಿಂದ ಅಲ್ಲ,ದಯೆಯಿಂದ ಮಾನವನಾಗೋಣ. ಅಧಿಕಾರದಿಂದ ಅಲ್ಲ,ಅನುಕಂಪದಿಂದ ಎತ್ತರವಾಗೋಣ. ಒಂದು ದಿನ ಸಮಾಜದ ಸಮಾನತೆಯ ಕಡೆ ತಿರುಗಿದರೆ,ಬಡತನ ಪಾಪವಲ್ಲ, ಮಾನವತೆ ಧರ್ಮವಾಗುತ್ತದೆ. ಅದಾಗ ಬಡವರ ಬಾಯಿಹುಣ್ಣಿಗೆ ಶ್ರೀಮಂತರ ಉಪ್ಪುನೀರು ಅಲ್ಲ, ಸಹಾನುಭೂತಿಯ ಸಿಹಿನೀರು ಹರಿಯುತ್ತದೆ. ಹಾಗಾಗಿ ಮಾನವತೆ ಎಂಬ ಒಂದು ದೀಪ ಹಚ್ಚಿದರೆ,ಬಡವನ ಬಾಯಿಹುಣ್ಣಿಗೆ ಉಪ್ಪುನೀರು ಅಲ್ಲ, ಒಲವಿನ ತುಪ್ಪ ಹಚ್ಚುವ ದಿನ ಬರಬೇಕು.




