February 24, 2026

ಐದು ದಿನದ ಗಂಡು ಮಗುವನ್ನು ಬ್ಯಾಗ್‌ನಲ್ಲಿ ಹಾಕಿ ಅನಾಥವಾಗಿ ಬಿಟ್ಟು ಹೋದ ಪೋಷಕರು

0
image_editor_output_image2001380093-1771889324853.jpg

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಡಿಯೂರಿನಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಕೇವಲ ಐದು ದಿನದ ಗಂಡು ಮಗುವನ್ನು ಬ್ಯಾಗ್‌ನಲ್ಲಿ ಹಾಕಿ ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯದ ಸಮೀಪವಿರುವ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ಸೋಮವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ.

ಯಾರೋ ಅಪರಿಚಿತ ಕಿರಾತಕರು ಒಂದು ಬ್ಯಾಗ್‌ನಲ್ಲಿ ಮಗುವನ್ನು ಇಟ್ಟು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ಒಳಗಿನಿಂದ ಮಗು ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ಸ್ಥಳೀಯರು ಗಾಬರಿಗೊಂಡು ಹತ್ತಿರ ಹೋಗಿ ನೋಡಿದಾಗ ಈ ಕೃತ್ಯ ಬಯಲಾಗಿದೆ.

ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಮೃತೂರು ಠಾಣೆಯ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸದ್ಯ ಮಗುವನ್ನು ಹೆಚ್ಚಿನ ಆರೈಕೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ‘ಸಖಿ’ ಕೇಂದ್ರಕ್ಕೆ ರವಾನಿಸಲಾಗಿದೆ.

ವೈದ್ಯಕೀಯ ತಪಾಸಣೆಯ ನಂತರ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ಮಗುವಿಗೆ ಸುಮಾರು ಐದು ದಿನಗಳಿರಬಹುದು ಎಂದು ಅಂದಾಜಿಸಲಾಗಿದೆ. ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.

ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಬಿಟ್ಟು ಹೋದ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಕಿರಾತಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!