ಉಡುಪಿ: ನಗರಸಭೆಗೆ ಪಾವತಿಸಬೇಕಿದ್ದ ಆಸ್ತಿ ತೆರಿಗೆ ಹಣ ದುರುಪಯೋಗ: ನಗರಸಭೆಯ ಸಿಬ್ಬಂದಿ ಸೇರಿ ಇಬ್ಬರ ಬಂಧನ
ಉಡುಪಿ: ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ವಂಚನೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ನಗರಸಭೆಯ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರಸಭೆಗೆ ಪಾವತಿಸಬೇಕಿದ್ದ ಆಸ್ತಿ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ಮಲ್ಪೆ ರಸ್ತೆಯ ನಿವಾಸಿ ಬಿ. ಶಾಲಿನಿ (56) ಮತ್ತು ಉಡುಪಿ ಕುಕ್ಕಿಕಟ್ಟೆಯ ಸಚ್ಚಿದಾನಂದ ಲೇಔಟ್ ನಿವಾಸಿ ಗಣೇಶ್ (24) ಎಂದು ಗುರುತಿಸಲಾಗಿದೆ.
ನಗರಸಭೆ ಅಧಿಕಾರಿಗಳು ನೀಡಿರುವ ದೂರಿನ ಪ್ರಕಾರ, ಫೆಬ್ರವರಿ 16 ರಂದು ಆನಂದ ಸುವರ್ಣ ಎಂಬುವವರು ಕಲ್ಮಾಡಿಯಲ್ಲಿರುವ ತಮ್ಮ ಕಟ್ಟಡಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಆಸ್ತಿ ತೆರಿಗೆಯಾದ 34,730 ರೂ. ಪಾವತಿಸಲು ನಗರಸಭೆ ಕಚೇರಿಗೆ ಬಂದಿದ್ದರು. ಈ ಹಣವನ್ನು ಕಚೇರಿಯ ಹೊರಗೆ ಕೆಲಸ ಮಾಡುತ್ತಿದ್ದ ಶಾಲಿನಿ ಎಂಬ ಮಹಿಳೆಗೆ ನೀಡಲಾಗಿತ್ತು. ಆಕೆ 2025 ರ ಅಕ್ಟೋಬರ್ 16ರಂದು ದಿನಾಂಕವಿರುವ ರಸೀದಿಯನ್ನು ನೀಡಿ ಹಣ ಪಡೆದಿದ್ದರು.
ನಂತರ ನಗರಸಭೆಯ ಆನ್‌ಲೈನ್ ವ್ಯವಸ್ಥೆಯಲ್ಲಿ ಪರಿಶೀಲಿಸಿದಾಗ ಆಸ್ತಿ ತೆರಿಗೆ ಪಾವತಿಯಾಗಿಲ್ಲ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಶಾಲಿನಿಯವರನ್ನು ವಿಚಾರಿಸಿದಾಗ, ಆನಂದ ಸುವರ್ಣ ಅವರಿಂದ ಹಣ ಪಡೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನಂತರ ಫೆಬ್ರವರಿ 16 ರಂದು ಹೊಸ ಚಲನ್ ಸಿದ್ಧಪಡಿಸಿ 35,213 ರೂ. ಬಾಕಿಯನ್ನು ಪಾವತಿಸಲಾಗಿದೆ.
ಶಾಲಿನಿಯವರು ತೆರಿಗೆ ಹಣವನ್ನು ಸರ್ಕಾರಕ್ಕೆ ಪಾವತಿಸದೆ, ಚಲನ್ ಮೇಲೆ ಯೂನಿಯನ್ ಬ್ಯಾಂಕ್‌ನ ಮೊಹರನ್ನು ನಕಲಿಯಾಗಿ ಹಾಕಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಜೊತೆಗೆ ಇತರರೊಂದಿಗೆ ಸೇರಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ನೇತೃತ್ವದ ತಂಡವು ಫೆಬ್ರವರಿ 20 ರಂದು ಆರೋಪಿಗಳನ್ನು ಬಂಧಿಸಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗೋಪಾಲಕೃಷ್ಣ ಜೋಗಿ ಮತ್ತು ಸಿಬ್ಬಂದಿಗಳಾದ ಸುರೇಂದ್ರ, ಅಬ್ದುಲ್ ಬಶೀರ್, ಹೇಮಂತ್, ಸವಿತಾ, ಪವಿತ್ರಾ ಮತ್ತು ಸ್ಫೂರ್ತಿ ಭಾಗವಹಿಸಿದ್ದರು.
ಬಂಧಿತರನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




