April 10, 2026

ಮಲ್ಪೆ: ಮೀನು ವ್ಯಾಪಾರಿ ಮೇಲೆ ಹಲ್ಲೆ ನಡೆಸಿ 6 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎರಗಿಸಿದ್ದ ಆರೋಪಿಯ ಸೆರೆ

0
image_editor_output_image1625003967-1771715927226.jpg

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಮುಖಕ್ಕೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಚಿನ್ನದ ಸರ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮೂಲದ, ಪ್ರಸ್ತುತ ಮಲ್ಪೆ ಕೊಳ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮುತ್ತಣ್ಣ (20) ಎಂದು ಗುರುತಿಸಲಾಗಿದೆ. ಬಂಧಿತನಿಂದ ದರೋಡೆ ಮಾಡಿದ 37.570 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 20ರ ಮುಂಜಾನೆ ಮೀನು ವ್ಯಾಪಾರಿ ದಯಾನಂದ ಕುಂದರ್ ಅವರು ಬಂದರಿನಲ್ಲಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಬಂದು ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದನು. ತಕ್ಷಣವೇ ಇತರ ಇಬ್ಬರು ಸಹಚರರು ಸೇರಿ ಚಾಕು ತೋರಿಸಿ ಬೆದರಿಕೆ ಹಾಕಿದ್ದರು.

ದಯಾನಂದ ಅವರು ಸರ ಕೊಡಲು ನಿರಾಕರಿಸಿದ್ದಕ್ಕೆ ಮುತ್ತಣ್ಣ ಮತ್ತು ಆತನ ಸಹಚರರು ಅವರ ಮುಖ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ, ಸುಮಾರು 6 ಲಕ್ಷ ರೂ. ಮೌಲ್ಯದ ಆರು ಪವನ್ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಉಡುಪಿ ಡಿವೈಎಸ್‌ಪಿ ಬೆಳ್ಳಿಯಪ್ಪ ಮತ್ತು ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

ತಂಡದಲ್ಲಿದ್ದ ಅಧಿಕಾರಿಗಳಾದ ಎಸ್.ಇ. ಹುಸೇನ್, ಆದರ್ಶ ಮತ್ತು ಬಸವರಾಜ ಹೈದ್ರಿ ಅವರು ಫೆಬ್ರವರಿ 20ರ ರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಉಳಿದ ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

You may have missed

error: Content is protected !!