ಮಧ್ಯಪ್ರಾಚ್ಯದ ಪ್ರಮುಖ 100 ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಝಕರಿಯ ಜೋಕಟ್ಟೆ
ಮಧ್ಯಪ್ರಾಚ್ಯದ ಪ್ರಮುಖ 100 ಅನಿವಾಸಿ ಭಾರತೀಯ ಉದ್ಯಮಿಗಳ ಪಟ್ಟಿಯನ್ನು Enterpreneur Middle East Magazine ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಇದರಲ್ಲಿ ಮಂಗಳೂರು ಮೂಲದ ಉದ್ಯಮಿ, ಸೌದಿ ಅರೇಬಿಯಾದ “ಅಲ್ ಮುಝೈನ್’ ಕಂಪೆನಿ ಸಿಇಒ ಝಕರಿಯ ಜೋಕಟ್ಟೆ ಅವರು ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಭಾವಿ ಟಾಪ್ 100 ಉದ್ಯಮಿಗಳಲ್ಲಿ 19ನೇ ಸ್ಥಾನ ಪಡೆದಿದ್ದಾರೆ.

ರೀಟೈಲ್, ರಿಯಲ್ ಎಸ್ಟೇಟ್, ಆರೋಗ್ಯ, ಫೈನಾನ್ಸ್, ಟೆಕ್ನಾಲಜಿ ಮೊದಲಾದ ಕ್ಷೇತ್ರದ ಪ್ರಭಾವಿಗಳಲ್ಲಿ ಮಂಗಳೂರಿನ ಝಕರಿಯ ಜೋಕಟ್ಟೆ 19ನೇ ಸ್ಥಾನದಲ್ಲಿರುವುದು ಕರಾವಳಿಗರಿಗೆ ಹೆಮ್ಮೆ ತಂದಿದೆ. ಕಳೆದ ರಾಜ್ಯೋತ್ಸವದಂದು ಮುಖ್ಯಮಂತ್ರಿಯವರಿಂದ ಪ್ರಶಸ್ತಿಗೆ ಬಾಜನರಾಗಿದ್ದ ಝಕರಿಯ ಜೋಕಟ್ಟೆ ತನ್ನ ಕಂಪೆನಿಯಲ್ಲಿ ಎಂಟು ಸಾವಿರ ಮಂದಿಗೆ ಉದ್ಯೋಗ ನೀಡಿ ಸಲಹುತ್ತಿದ್ದಾರೆ. ಹತ್ತು ಹಲವು ಸಾಮಾಜಿಕ ಸಂಘಟನೆಗಳ ಪೋಷಕರು, ಸಾವಿರಾರು ಮಂದಿ ಅಶಕ್ತರ ಕಣ್ಣೀರೊರೆಸುತ್ತಿರುವ ಝಕರಿಯ ಜೋಕಟ್ಟೆ ಟಾಪ್ 100 ಎನ್ನಾರೈ ಪಟ್ಟಿಯಲ್ಲಿರುವುದು ವಿಶೇಷವಾಗಿದೆ.
ಟಾಪ್ 100 ರ ಮೊದಲ ಸ್ಥಾನದಲ್ಲಿ ಲುಲು ಗ್ರೂಪ್ ನ ಎಂ.ಎ. ಯೂಸುಫಲಿ ಇದ್ದಾರೆ. ಜೆಮ್ಸ್ ಎಜುಕೇಶನ್ ಗ್ರೂಪ್ ನ ಸನ್ನಿ ವರ್ಗಿ, ದುಬೈ ಇಸ್ಲಾಮಿಕ್ ಬ್ಯಾಂಕ್ ಸಿಇಒ ಡಾ| ಅದ್ನಾನ್ ಚಿಲ್ವಾನ್, ಆಸ್ಟರ್ ಗ್ರೂಪಿನ ಡಾ| ಆಝಾದ್ ಮೂಪನ್, ಬುರ್ಜಿಲ್ ಹೋಲ್ಡಿಂಗ್ ನ ಸಂಶೀರ್ ವಲಯಿಲ್, ಜೋಯ್ ಆಲುಕ್ಕ ಮೊದಲಾದವರು ಸ್ಥಾನ ಪಡೆದಿದ್ದಾರೆ. ತುಂಬೆ ಯುನಿವರ್ಸಿಟಿ ಮುಖ್ಯಸ್ಥರಾದ ಮಂಗಳೂರು ಮೂಲದ ತುಂಬೆ ಮೊಯ್ದೀನ್ 30ನೇ ಸ್ಥಾನದಲ್ಲಿದ್ದಾರೆ.




