ಮಂಗಳೂರು: ಪಂಪ್‌ವೆಲ್ ವೃತ್ತ, ಕರಾವಳಿ ಜಂಕ್ಷನ್ ಸಂಪರ್ಕಿಸುವ ರಸ್ತೆಯ ಕಾಮಗಾರಿ: ಫೆಬ್ರವರಿ 15ರಿಂದ ಜೂನ್ 15ರವರೆಗೆ ರಸ್ತೆ ಸಂಚಾರ ಬದಲಾವಣೆ
ಮಂಗಳೂರು: ಪಂಪ್‌ವೆಲ್ ವೃತ್ತ ಮತ್ತು ಕರಾವಳಿ ಜಂಕ್ಷನ್ ಅನ್ನು ಸಂಪರ್ಕಿಸುವ ರಸ್ತೆಯ ಚತುಷ್ಪಥ ಅಭಿವೃದ್ಧಿ ಕಾಮಗಾರಿಯನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರು ನಗರ ಪೊಲೀಸರು ಫೆಬ್ರವರಿ 15ರಿಂದ ಜೂನ್ 15ರವರೆಗೆ ಪ್ರಮುಖ ಸಂಚಾರ ಬದಲಾವಣೆಗಳನ್ನು ಘೋಷಿಸಿದ್ದಾರೆ.
ನಾಲ್ಕು ತಿಂಗಳ ಕಾಲ ನಡೆಯಲಿರುವ ಈ ಕಾಮಗಾರಿಯ ಅವಧಿಯಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವುದು ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ತಾತ್ಕಾಲಿಕ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೆಯ ರಸ್ತೆ ಹಾಗೂ ಕಂಕನಾಡಿ ಜಂಕ್ಷನ್ ಮೂಲಕ ನಗರ ಪ್ರವೇಶ ಮಾರ್ಗವನ್ನು ಏಕಮುಖ ರಸ್ತೆಯಾಗಿ ಪರಿವರ್ತಿಸಲಾಗಿದೆ. ಇದೇ ವೇಳೆ, ಕರಾವಳಿ ಜಂಕ್ಷನ್‌ನಿಂದ ಪಂಪ್‌ವೆಲ್ ವೃತ್ತದವರೆಗೆ ಇರುವ ಬೈಪಾಸ್ ರಸ್ತೆಯನ್ನು ನಗರದಿಂದ ನಿರ್ಗಮಿಸುವ ವಾಹನಗಳಿಗೆ ಏಕಮುಖ ಮಾರ್ಗವನ್ನಾಗಿ ಘೋಷಿಸಲಾಗಿದೆ.
ಹೊಸ ಸಂಚಾರ ನಿಯಮಾವಳಿಗಳ ಪ್ರಕಾರ, ಪಂಪ್‌ವೆಲ್ ಜಂಕ್ಷನ್‌ನಿಂದ ಕರಾವಳಿ ಜಂಕ್ಷನ್‌ಗೆ ನೇರ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸಬೇಕಾದ ವಾಹನಗಳು ಕಂಕನಾಡಿ ಹಳೆಯ ರಸ್ತೆಯ ಮೂಲಕ ಪರ್ಯಾಯವಾಗಿ ಸಂಚರಿಸಬೇಕು. ತಲಪಾಡಿ ಮತ್ತು ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರ ಪ್ರವೇಶಿಸುವ ವಾಹನಗಳು ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ವೃತ್ತ ಅಥವಾ ಮಂಗಳಾದೇವಿ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಬಿ.ಸಿ.ರೋಡ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ತೆರಳುವ ಭಾರೀ ವಾಹನಗಳು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಪಡೀಲ್ ಜಂಕ್ಷನ್ ಮೂಲಕ ನಂತೂರು ಕಡೆಗೆ ಸಂಚರಿಸಬೇಕು. ಅದೇ ರೀತಿ, ಕೇರಳ ಮತ್ತು ಕಾಸರಗೋಡು ಭಾಗದಿಂದ ಕರಾವಳಿ ಕಡೆಗೆ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಭಾರೀ ವಾಹನಗಳು ಪಂಪ್‌ವೆಲ್ ಜಂಕ್ಷನ್‌ನಿಂದ ನಂತೂರು ಮಾರ್ಗವನ್ನು ಅನುಸರಿಸಬೇಕು.
ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಮೂಲಕ ಪಂಪ್‌ವೆಲ್ ಕಡೆಗೆ ತೆರಳುವ ವಾಹನಗಳಿಗೆ ಅವರ ಪ್ರಸ್ತುತ ಮಾರ್ಗದಲ್ಲೇ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಸಂಚಾರ ದಟ್ಟಣೆಯನ್ನು ತಪ್ಪಿಸಲು ಕೆಲವು ಪ್ರಮುಖ ರಸ್ತೆಗಳಲ್ಲಿ ಎರಡೂ ಬದಿಗಳಲ್ಲೂ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಂಕನಾಡಿ ಜಂಕ್ಷನ್–ಪಂಪ್‌ವೆಲ್ ರಸ್ತೆ (ಕಂಕನಾಡಿ ಹಳೆಯ ರಸ್ತೆ), ಕರಾವಳಿ–ಕಂಕನಾಡಿ ರಸ್ತೆ, ಕಂಕನಾಡಿ–ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ–ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಯೋಜನೆಯ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸಿ, ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ವಿನಂತಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ನಿಯಮಗಳು ಜಾರಿಯಲ್ಲಿರಲಿವೆ.




