ಐದು ವರ್ಷಗಳ ಸೇವಾ ಪಯಣಕ್ಕೆ ಕೃತಜ್ಞತೆ: ಕೊಳ್ನಾಡು ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷೆ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ
ಕೊಳ್ನಾಡು ಗ್ರಾಮ ಪಂಚಾಯತ್‌ನ ಅತೀ ಕಿರಿಯ ಸದಸ್ಯೆಯಾಗಿ ಹಾಗೂ ಒಂದು ಅವಧಿಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ತಾಳಿತ್ತನೂಜಿ–ನಾರ್ಶದ ಪ್ರಜ್ಞಾವಂತ ಮತದಾರರು, ಪಕ್ಷದ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಗ್ರಾಮದ ಎಲ್ಲಾ ಹಿತೈಷಿ ನಾಗರೀಕರಿಗೆ,ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ (ಸುಗ್ರಾಮ)ಇವರಿಗೂ ಮೊಟ್ಟ ಮೊದಲನೆಯದಾಗಿ ತುಂಬು ಹೃದಯದ ಧನ್ಯವಾದಗಳು.
ತಾಳಿತ್ತನೂಜಿ–ನಾರ್ಶ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಹಾಗೂ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯತ್‌ಗಳಲ್ಲೊಂದಾದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಜವಾಬ್ದಾರಿಯಿಂದ ಸ್ವೀಕರಿಸಿ, ನನ್ನ ಪತಿಯ ಸಮಾಜಸೇವೆಯಿಂದ ಪ್ರೇರಣೆ ಪಡೆದು ಹಾಗೂ ನನ್ನ ಮಾವ ಮೊಯ್ದುಕುಂಞ ತಾಳಿತ್ತನೂಜಿಯವರ ಸತ್ಯ–ನ್ಯಾಯ–ನೀತಿಯನ್ನು ಆದರ್ಶವಾಗಿ ಅಳವಡಿಸಿಕೊಂಡು, ಜನರ ನಿರೀಕ್ಷೆಗಳನ್ನು ಹುಸಿಯಾಗಿಸದೇ ವಾರ್ಡು ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ.
ಎಲ್ಲವನ್ನು ಇಲಾಖೆಗಳಲ್ಲೇ ಸೀಮಿತಗೊಳಿಸದೆ, ಪತಿಯ ಸಹಾಯದೊಂದಿಗೆ ಅಸ್ವದ ಟ್ರಸ್ಟ್ ಮಂಗಳೂರು, ಎಸ್‌ಕೆಎಸ್‌ಎಂ ಸಮಾಜಸೇವಾ ಘಟಕ ಮಂಗಳೂರು,ಜೆ.ಐ.ಎಚ್ ಸಮಾಜಸೇವಾ ಘಟಕ ಮಂಗಳೂರು, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ–ಸಂಸ್ಥೆಗಳ ಸಹಕಾರದಿಂದ ಮೂಲಭೂತ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ನನಗಿದೆ. ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಸಾಮಾನ್ಯ ಸಭೆ, ವಾರ್ಡ್ ಸಭೆ,ಗ್ರಾಮ ಸಭೆ ಅಥವಾ ಅಧಿಕೃತ ಸಭೆಯನ್ನೂ ಗೈರಾಗದೆ ಭಾಗವಹಿಸಿ ನಾಗರೀಕರ ಕುಂದುಕೊರತೆಗಳಿಗೆ ಧ್ವನಿಯಾಗಿ ನಿಂತ ಆತ್ಮತೃಪ್ತಿ ನನಗಿದೆ.
ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ತಾಳಿತ್ತನೂಜಿ–ನಾರ್ಶ ವಾರ್ಡು ಸೇರಿದಂತೆ ಸಂಪೂರ್ಣ ಕೊಳ್ನಾಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಮೂಲಸೌಕರ್ಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ನಡೆದ ಪ್ರತಿಯೊಂದು ಕಾರ್ಯಕ್ಕೂ ನಾಗರೀಕರ ಸಹಕಾರವೇ ನನ್ನ ಶಕ್ತಿ ಆಗಿತ್ತು. ಸಾರ್ವಜನಿಕರ ವಿಶ್ವಾಸ, ಪ್ರೀತಿ ಹಾಗೂ ಪ್ರೋತ್ಸಾಹದಿಂದಲೇ ಈ ಸೇವಾ ಪಯಣ ಸಾಧ್ಯವಾಯಿತು. ಮುಂದಿನ ದಿನಗಳಲ್ಲೂ ಯಾವುದೇ ಹುದ್ದೆಯ ಆಸೆ ಇಲ್ಲದೆ, ಸಾಮಾನ್ಯ ನಾಗರಿಕೆಯಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಸಂಘ–ಸಂಸ್ಥೆಗಳು, ಸಮಾಜಸೇವಕರು ಹಾಗೂ ದಾನಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿರುವ ಅವರು, “ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರೂ ನನ್ನ ಜೀವನದ ದೊಡ್ಡ ಶಕ್ತಿಯಾಗಿದ್ದು, ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸೇವಾ ಪಯಣದಲ್ಲಿ ಗೃಹಿಣಿಯಾಗಿ ಕೆಲಸದ ಒತ್ತಡದ ನಡುವೆಯೋ! ಅಥವಾ ಅನುಭವದ ಕೊರತೆಯಿಂದಲೋ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದರು. ನನಗೆ ನಿರಂತರವಾಗಿ ಬೆಂಬಲ ನೀಡಿ ಸಹಕರಿಸಿದ ಪ್ರಬುದ್ಧ ಮತದಾರರು, ನಾಗರೀಕರು, ಹಿತೈಷಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು–ಸದಸ್ಯರು, ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ–ಕಾಲೇಜು ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.
*ಕೆ. ಎ. ಅಸ್ಮ ಹಸೈನಾರ್ ತಾಳಿತ್ತನೂಜಿ*
*ನಿಕಟಪೂರ್ವ ಉಪಾಧ್ಯಕ್ಷರು,*
*ಕೊಳ್ನಾಡು ಗ್ರಾಮ ಪಂಚಾಯತ್*




