ಕೋಟ: ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಪೊಲೀಸರಿಂದ ಲಾಠಿ ಚಾರ್ಜ್:
ಡಿಎಸ್ಪಿ ನೇತೃತ್ವದಲ್ಲಿ ತನಿಖೆ- ಎಸ್ಐ ಮತ್ತು ಐವರು ಸಿಬ್ಬಂದಿಗಳ ಸ್ಥಳಾಂತರ: ಎಸ್ಪಿ ಆದೇಶ
ಉಡುಪಿ: ಕೋಟದಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಪೋಲಿಸರು ದೌರ್ಜನ್ಯ ನಡೆಸಿದ ಘಟನೆ ಸಂಬಂಧಿಸಿ ಡಿಎಸ್ಪಿ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶ ಮಾಡಿದ್ದಾರೆ.
ಡಿಎಸ್ಪಿ ವಿಚಾರಣೆ ಮುಗಿಯುವ ತನಕ ಕೃತ್ಯದಲ್ಲಿ ಭಾಗಿಯಾಗಿರುವ ಕೋಟ ಠಾಣೆಯ ಪೊಲೀಸರು ಕರ್ತವ್ಯಕ್ಕೆ ಹಾಜರಾಗುವಂತಿಲ್ಲ. ಪಿಎಸ್ ಐ ಸಂತೋಷ್ ಮತ್ತು ಐವರು ಸಿಬ್ಬಂದಿಗಳನ್ನು ಕೋಟ ಠಾಣೆಯಿಂದ ಶಿಫ್ಟ್ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಮುಂದಿನ ಆದೇಶದ ವರೆಗೆ ಪಿಎಸ್ ಐ ಮತ್ತು 5 ಮಂದಿ ಸಿಬ್ಬಂದಿಗಳು ಕೋಟ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶ ಮಾಡಿದ್ದಾರೆ. ಎರಡು ದಿನದಲ್ಲಿ ಇಲಾಖೆಯ ಪ್ರಾಥಮಿಕ ತನಿಖೆ ಪೂರ್ಣ ಆಗುವ ನಿರೀಕ್ಷೆ ಇದ್ದು ಅಲ್ಲಿ ವರೆಗೆ ಹಾಜರಾಗುವಂತಿಲ್ಲ. ತನಿಖೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡುಬಂದಲ್ಲಿ ಪೊಲೀಸರು ಸಸ್ಪೆಂಡ್ ಆಗುವ ಸಾಧ್ಯತೆಯಿದೆ.
ಲೌಡ್ ಸ್ಪೀಕರ್ ರಾತ್ರಿ 10 ಗಂಟೆ ನಂತರವೂ ನಡೆಯುತಿತ್ತು. ಅಲ್ಲಿನ ಸ್ಥಳೀಯರು ಸ್ಟೇಶನ್ ಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಮತ್ತೆ 112 ಗೆ ದೂರು ಬಂದ ಹಿನ್ನಲೆಯಲ್ಲಿ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆ ನಿಜವಾಗಿದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಬಗ್ಗೆ ನಂಬಿಕೆ ಇರಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.