January 31, 2026

ಮಾಣಿಯ ಬಾಲವಿಕಾಸ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಪ್ರತಿಭಾ ಕಲೋತ್ಸವ-2025

0
IMG-20251224-WA0011.jpg

ವಿಟ್ಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮಾಣಿ ಸ್ಥಳೀಯ ಸಂಸ್ಥೆ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ ಇವರ ಸಹಭಾಗಿತ್ವದಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಲೋತ್ಸವ–2025 ಡಿಸೆಂಬರ್ 23ರಂದು ಬಾಲವಿಕಾಸ ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ ಹಾಗೂ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷರೂ ಆದ ಪ್ರಹ್ಲಾದ ಶೆಟ್ಟಿ ಜೆ. ವಹಿಸಿದ್ದರು. ಜಿಲ್ಲಾ ದೈಹಿಕ ಪರಿವೀಕ್ಷಣಾಧಿಕಾರಿ ಭುವನೇಶ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಂಟ್ವಾಳ ತಾಲೂಕಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ ಕೆ. ಪ್ರತಿಭಾ ಕಲೋತ್ಸವ ಸಮಿತಿ–2025ರ ಸಂಚಾಲಕ ಬದಿಗುಡ್ಡೆ ಜಗನ್ನಾಥ ಚೌಟ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮದ ಸುವ್ಯವಸ್ಥಿತ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಶ್ಯಾಮಲಾ ಸ್ವಾಗತಿಸಿ, ಜಿಲ್ಲಾ ತರಬೇತಿ ಆಯುಕ್ತ ಪ್ರತೀಮ್ ಕುಮಾರ್ ವಂದಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಣಿ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಬಾಲಕೃಷ್ಣ ಆಳ್ವ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೈಡ್ಸ್ ವಿಭಾಗದ ಜಿಲ್ಲಾ ಆಯುಕ್ತೆ ಶ್ರೀಮತಿ ವಿಮಲ ರಂಗಯ್ಯ, ಜಿಲ್ಲಾ ತರಬೇತಿ ಆಯುಕ್ತರಾದ ಶಾಂತಾರಾಮ ಪ್ರಭು, ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ದೇವರಮಜಲು, ಮಾಣಿ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಹಾಗೂ ಕಾರ್ಯದರ್ಶಿ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಶಾಲಾ -ಕಾಲೇಜುಗಳಿಂದ 1200 ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ದಿನ ನಡೆದ ಒಟ್ಟು 56 ಸ್ಪರ್ಧೆಗಳಿಗೆ ವಿವಿಧ ರಂಗಗಳಲ್ಲಿ ಪರಿಣಿತಿ ಪಡೆದ 36 ಅರ್ಹ ತೀರ್ಪುಗಾರರನ್ನು ಆಹ್ವಾನಿಸಿ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ್ದ ಶಾಲೆಗಳಿಗೆ ವಿಭಾಗವಾರು ಸಮಗ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಲೋತ್ಸವಕ್ಕೆ ಕಳೆ ತುಂಬಿದ ಪಿ. ಜಿ. ಆರ್. ಸಿಂಧ್ಯ ಆಗಮನ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್ ಸಿಂಧ್ಯರವರು ಕಾರ್ಯಕ್ರಮಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಬಾಲವಿಕಾಸ ಶಾಲೆಯು ಅಳವಡಿಸಿಕೊಂಡ ತಂತ್ರಜ್ಞಾನದ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಅಳವಡಿಸಿಕೊಂಡ RFID ಗೇಟ್, ಕಲೋತ್ಸವದ ವಿಜೇತ ವಿದ್ಯಾರ್ಥಿಗಳಿಗೆ ನೀಡಿದ ಸ್ಕೌಟ್ಸ್ – ಗೈಡ್ ಲೋಗೋ ಆಕಾರದ ಅಚ್ಚಿನ ಪದಕಗಳು, ಸ್ಪರ್ಧಾ ವಿಜೇತರ ಭಾವಚಿತ್ರ ಸಮೇತವಾಗಿ ಮುದ್ರಣಗೊಳ್ಳುತ್ತಿದ್ದ ಪ್ರಶಸ್ತಿ ಪತ್ರಗಳನ್ನು ಬಹುವಾಗಿ ಮೆಚ್ಚಿಕೊಂಡರು. ಬಾಲವಿಕಾಸ ಶಾಲೆಯನ್ನು ಸಂಪೂರ್ಣವಾಗಿ ವೀಕ್ಷಿಸಿದ ಅವರು ಬಾಲವಿಕಾಸ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಿ. ಜಿ. ಆರ್ ಸಿಂಧ್ಯರವರನ್ನು ಬಾಲವಿಕಾಸ ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!