December 22, 2025

ಅನ್ಯಜಾತಿಯ ಯುವಕನ ಜೊತೆ ಮದುವೆಯಾದ ಸಿಟ್ಟಿಗೆ ಗರ್ಭಿಣಿ ಮಗಳನ್ನು ಕೊಲೆ ಮಾಡಿದ ಪೋಷಕರು

0
image_editor_output_image182965193-1766388649484.jpg

ಹುಬ್ಬಳ್ಳಿ: ಬೇರೆ ಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಾಳೆ ಎಂಬ ಸಿಟ್ಟಿಗೆ ಪಾಲಕರು ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ ಅಲ್ಲದೆ, ಹುಡುಗನ ಕುಟುಂಬದವರ ಮೇಲೂ ಹಲ್ಲೆ ನಡೆಸಿರುವ ಪ್ರಕರಣ ತಾಲ್ಲೂಕಿನ ಬೆಳಗಲಿಯ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮೃತರನ್ನು ಗಾಯವಾಗಿದ್ದ ಆರು ತಿಂಗಳ ಗರ್ಭಿಣಿ ಮಾನ್ಯಾ ದೊಡ್ಡಮನಿ (19) ಎಂದು ಗುರುತಿಸಲಾಗಿದೆ.

ಎಂಟು ತಿಂಗಳ ಹಿಂದೆ ಯುವತಿ ಮಾನ್ಯಾ, ತನ್ನದೇ ಗ್ರಾಮದ ಅನ್ಯ ಜಾತಿಯ ಯುವಕ ವಿವೇಕಾನಂದ ದೊಡ್ಡಮನಿ ಅವರ ಜೊತೆ ಮದುವೆಯಾಗಿದ್ದರು. ಯುವತಿ ಕುಟುಂಬದವರು ವಿರೋಧಿಸಿದ್ದಕ್ಕೆ ತಹಶೀಲ್ದಾರ್‌ ಹಾಗೂ ಪೊಲೀಸರು ಎರಡು ಕುಟುಂಬದವರನ್ನು ಕರೆಸಿ ಬುದ್ಧಿ ಹೇಳಿ, ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಾಣ ಭಯದಿಂದ ದಂಪತಿ ಹಾವೇರಿಗೆ ಹೋಗಿ ವಾಸವಿದ್ದರು.

ಡಿಸೆಂಬರ್ 8ರಂದು ಇನಾಂ ವೀರಾಪುರಕ್ಕೆ ದಂಪತಿ ಮರಳಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆ ಮೇಲೆ ಭಾನುವಾರ ಯುವತಿಯ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ನಂತರ ಅವರ ಮನೆಗೆ ತೆರಳಿ ಮಾನ್ಯಾ, ರೇಣವ್ವ ಹಾಗೂ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದ ಆರು ತಿಂಗಳ ಗರ್ಭಿಣಿ ಮಾನ್ಯಾ ದೊಡ್ಡಮನಿ (19) ಅವರನ್ನು ಚಿಕಿತ್ಸೆಗಾಗಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಾನ್ಯಾ ಹಾಗೂ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹುಡುಗನ ತಾಯಿ ರೇಣವ್ವ ಹಾಗೂ ದೊಡ್ಡಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಗುಂಜನ್‌ ಆರ್ಯ, ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶಗೌಡ ಪಾಟೀಲ, ವೀರನಗೌಡ ಪಾಟೀಲ ಮತ್ತು ಅರುಣಗೌಡ ಪಾಟೀಲ ಅವರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಏಳು–ಎಂಟು ಮಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮಾನ್ಯಾ ಮೃತಪಟ್ಟಿದ್ದು, ಗ್ರಾಮಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.

ಕಳೆದ ಮೇ ತಿಂಗಳಲ್ಲಿ ಮಾನ್ಯಾ ಪಾಟೀಲ ಅವರು, ತನ್ನದೇ ಗ್ರಾಮದ ಅನ್ಯ ಜಾತಿಯ ಹುಡುಗನೊಂದಿಗೆ ಮದುವೆಯಾಗಿದ್ದರು. ಅದಕ್ಕೆ ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಯಾವ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ತನಿಖೆ ನಂತರವೇ ತಿಳಿದು ಬರಲಿದೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!