ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಪುತ್ರನ ಕಾರು ಢಿಕ್ಕಿ: ಯುವಕ ಸಾವು
ಬೆಂಗಳೂರು: ಕಾಂಗ್ರೆಸ್ನ ಪ್ರಭಾವಿ ರಾಜಕಾರಣಿ HM ರೇವಣ್ಣ ಅವರ ಪುತ್ರ ಶಶಾಂಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆ ಅಪಘಾತದಿಂದ 23 ವರ್ಷದ ಯುವಕನ ಪ್ರಾಣ ಹೋಗಿದೆ.
ರಾಜೇಶ್ ಬಿ.ಜಿ ಮೃತ ಯುವಕ. ನಿನ್ನೆ ರಾತ್ರಿ 10.30ರ ಸುಮಾರಿಗೆ ಗುಡೆಮಾರೇನಳ್ಳಿ ಟೋಲ್ನ 100 ಮೀಟರ್ ಅಂತರದಲ್ಲಿ ಅಪಘಾತ ನಡೆದಿದೆ. ಮೃತ ರಾಜೇಶ್ ದಾಬಸ್ ಪೇಟೆಯಿಂದ ಬರುತ್ತಿದ್ದ. ಈ ವೇಳೆ ಫಾರ್ಚುನರ್ ಕಾರು ಬಂದು ಗುದ್ದಿದೆ. ಬಳಿಕ ಕಾರನ್ನ ನಿಲ್ಲಿಸದೇ ಅಲ್ಲಿಂದ ಪರಾರಿ ಆಗಿದೆ.
ಕೂಡಲೇ ಅಲ್ಲಿದ್ದ ಸ್ಥಳೀಯರು ಫಾಲೋ ಮಾಡಿ ಕಾರನ್ನು ಚೇಸ್ ಮಾಡಿದ್ದಾರೆ. ಅಪಘಾತ ನಡೆದ ಸ್ಥಳದಿಂದ 5 ಕಿಲೋ ಮೀಟರ್ ದೂರದಲ್ಲಿ ಚೇಸ್ ಮಾಡಿ ಕಾರನ್ನ ನಿಲ್ಲಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಫಾರ್ಚೂನರ್ ಕಾರಿನಲ್ಲಿ ರೆವಣ್ಣ ಅವರ ಮಗ ಶಶಾಂಕ್, ಹೆಂಡತಿ, ಮಗು, ವಯಸ್ಸಾದ ವ್ಯಕ್ತಿಯಿದ್ದರು. ಎರಡು ಬೈಕ್ಗಳನ್ನು ಓವರ್ ಟೇಕ್ ಮಾಡಲು ಹೋಗಿ ಬೈಕ್ಗೆ ಕಾರು ಗುದ್ದಿದೆ.
ಸನ್ ಫ್ಲವರ್ ಆಯಿಲ್ ಫ್ಯಾಕ್ಟರಿ ಬಳಿ ಕಾರನ್ನು ತಡೆದು ನಿಲ್ಲಿಸಲಾಗಿದೆ. ಕಾರನ್ನು ನಿಲ್ಲಿಸುತ್ತಿದ್ದಂತೆಯೇ ರೇವಣ್ಣ ಪುತ್ರ ಆವಾಜ್ ಹಾಕಿದ್ದಾರೆ. ನಾನು HM ರೇವಣ್ಣ ಪುತ್ರ ಎಂದು ದೌಲತ್ತು ತೋರಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.





