ಡಿಸೆಂಬರ್ 06, ‘ಫ್ಯಾಸಿಸ್ಟ್ ವಿರೋಧಿ ದಿನ’: ಎಸ್‌ಡಿಪಿಐ ವಿಚಾರ ಸಂಕಿರಣ
ಮಂಗಳೂರು: ಬಾಬರಿ ಮಸೀದಿಯನ್ನು ಸಂಘಪರಿವಾರದ ದುಷ್ಕರ್ಮಿಗಳು ವ್ಯವಸ್ಥಿತವಾಗಿ ಪೂರ್ವಯೋಜಿತ ಷಡ್ಯಂತ್ರದೊಂದಿಗೆ ಧ್ವಂಸಗೊಳಿಸಿದ ಡಿಸೆಂಬರ್ 06ರ ದಿನವು ದೇಶದ ಇತಿಹಾಸದಲ್ಲಿ ಕರಾಳ ದಿನವೆಂದು ಘೋಷಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಫ್ಯಾಸಿಸ್ಟ್ ವಿರೋಧಿ ದಿನವಾಗಿ ಕರೆ ನೀಡಿದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಬಿಸಿರೋಡ್ ನ ಪಕ್ಷದ ಕಚೇರಿಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯನ್ನು ಅನಧಿಕೃತವಾಗಿ ಜಾರಿಗೊಳಿಸಲು ಪ್ರಯತ್ನ ಪಡುತ್ತಾ ಬಂದಿದೆ. ಫ್ಯಾಸಿಸಮ್ ಅಂದರೆ ರಾಷ್ಟ್ರವನ್ನು ಪೂಜಿಸುವ ಲೇಬಲ್ ಕೊಟ್ಟು ಹಿಂಸೆಯನ್ನು ಪ್ರೋತ್ಸಾಹಿಸುವ ಒಂದು ವ್ಯವಸ್ಥೆಯಾಗಿದೆ. ಇದೇ ಫ್ಯಾಸಿಸ್ಟ್ ಗೂಂಡಾಗಳು ಬಾಬರಿ ಮಸೀದಿಯನ್ನು ದ್ವಂಸ ಮಾಡಿದ್ದಾರೆ. ಈ ಫ್ಯಾಸಿಸ್ಟ್ ಮನಸ್ಥಿತಿಯ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಡಿಸೆಂಬರ್ 6 ಭಾರತದ ಜಾತ್ಯತೀತ ಇತಿಹಾಸಕ್ಕೆ ಕಳಂಕ ಬಂದ ದಿನವಾಗಿದೆ. ಅಂತರಾಷ್ಟ್ರೀಯವಾಗಿ ದೇಶದ ಮಾನ – ಪ್ರತಿಷ್ಠೆ ಕಳಚಿದ ದಿನ. ಮತೀಯವಾದ ಫ್ಯಾಸಿಸ್ಟ್ ಶಕ್ತಿಗಳು ಮತ್ತು ಆಡಳಿತ ವರ್ಗ ದ ಸಮ್ಮಿಳಿತ ದೊಂದಿಗೆ ಬಾಬರಿ ಮಸ್ಜಿದ್ ದ್ವಂಸ ಗೈಯಲ್ಪಟ್ಟು ಕೋಮುವಾದಿ ವಿಭಜನೆಗೆ ನಾಂದಿ ಹಾಡಲಾಯಿತು. ಇದು ಇಡೀ ದೇಶಕ್ಕೆ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದ ಜನರಿಗೆ ಬಗೆದ ದ್ರೋಹವಾಗಿದೆ. ಅಂದು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಸಂಘ ಪರಿವಾರದೊಂದಿಗೆ ಸೇರಿ ಮುಸ್ಲಿಮರಿಗೆ ಮತ್ತು ದೇಶದ ಸಂವಿಧಾನಕ್ಕೆ ಘೋರವಾದ ಅನ್ಯಾಯ ಮಾಡಿದೆ. ಬಳಿಕ ನ್ಯಾಯದ ಮೇಲೆ ನಂಬಿಕೆ ಮತ್ತು ಭರವಸೆ ಇಟ್ಟು ಸುದೀರ್ಘ ಇಪ್ಪತ್ತೇಳು ವರ್ಷಗಳ ಕಾಲ ಕಾದುಕುಳಿತ ಮುಸ್ಲಿಂ ಸಮುದಾಯಕ್ಕೆ ಅನ್ಯಾಯದ ತೀರ್ಪು ಕೊಡುವ ಮೂಲಕ ನ್ಯಾಯದ ಕಗ್ಗೊಲೆ ನಡೆದಿದೆ. ಇದು ಮಹಾ ಘೋರ ದ್ರೋಹವಾಗಿದೆ ಎಂದು ಹೇಳಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ವಿಚಾರ ಸಂಕಿರಣ ಉದ್ದೇಶಿಸಿ ವಿಷಯ ಮಂಡನೆಗೈದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಸ್ವಾಗತಿಸಿದರೆ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.







