ಮಂಗಳೂರು: ಬಜರಂಗದಳದ ಎಷ್ಟು ಪುಂಡರಿಗೆ ಭಜನೆ ಬರುತ್ತೇ?:
ಎಸ್ ಡಿ ಪಿ ಐ ಮುಖಂಡ ಅಲ್ಫೋನ್ಸೋ ಫ್ರಾಂಕೋ
ಮಂಗಳೂರು: ಬಜರಂಗದಳದ ಎಷ್ಟು ಪುಂಡರಿಗೆ ಭಜನೆ ಬರುತ್ತೆ? ನಾನು ಕ್ರೈಸ್ತ ಧರ್ಮದವನಾದರೂ ಕೆಲವು ಭಜನೆ ಹೇಳಬಲ್ಲೆ. ಬಿಜೆಪಿಯ ಎಲ್ಲರೂ ಕಲಿತದ್ದು ಕ್ರೈಸ್ತ ಸಂಸ್ಥೆಗಳಲ್ಲಿ. ಅವರು ಮಾತನಾಡಲೂ ಕಲಿತದ್ದು ನಮ್ಮ ಸಂಸ್ಥೆಗಳಲ್ಲ ಎಂದು ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ ಗುಡುಗಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮತಾಂತರ ನಿಷೇಧ ಮಸೂದೆ ಹಿಂಪಡೆಯಲು ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಬಗ್ಗೆ ಕಣ್ಣನ್ನು ತೆರೆಯುತ್ತಿಲ್ಲ. ಬಿಜೆಪಿಯಂತು ನಮ್ಮನ್ನು ಉಗ್ರಗಾಮಿಗಳಂತೆ ನೋಡುತ್ತಿದ್ದಾರೆ. ಈಗಲೂ ಕ್ರೈಸ್ತ ಸಂಸ್ಥೆಗಳಲ್ಲಿ ಸೀಟು ಕೊಡಿಸಲು ಬಿಜೆಪಿ ರಾಜಕಾರಣಿಗಳು ಸಿಸ್ಟರ್‌ಗಳ ಕೈಕಾಲು ಹಿಡಿಯುತ್ತಿದ್ದಾರೆ. ಕೆಲದಿನಗಳ ಹಿಂದೆ ಕ್ರೈಸ್ತ ಸಂಸ್ಥೆಯ ಮೇಲೆ ದಾಳಿ ಮಾಡಿದ ಬಜರಂಗದಳ, ಶ್ರೀರಾಮ ಸೇನೆಯ ಪುಂಡ ಯುವಕರು ನಿಮ್ಮ ಶಾಲೆಯಲ್ಲಿ ಗಣಪತಿ ಹಬ್ಬ ಯಾಕೆ ಮಾಡಲ್ಲ ಎಂದು ಕ್ರೈಸ್ತ ಸಂಸ್ಥೆಯ ಮುಖ್ಯಸ್ಥರನ್ನು ಪ್ರಶ್ನಿಸಿದ್ದಾರೆ..
ಅದೇ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆ ಮಾಡ್ತಾರ? ಇದನ್ನು ನಿಮಗೆ ಕೇಳಬಹುದಲ್ವಾ ಎಂದು ಹೇಳಿದ್ದಾರೆ. ಈ ಹಿಂದೆ ಚರ್ಚ್‌ಗೆ ದಾಳಿ ಮಾಡಿದವರು ಯಾರೂ ಉಳಿಯಲಿಲ್ಲ. ಅಷ್ಟೊಂದು ಸೇವೆ ಮಾಡಿದ ಮದರ್ ತೆರೆಸಾರಿಗೆ ಕೆಲ ಪುಂಡರು ಮತಾಂತರಿ ಎಂಬ ಪಟ್ಟ ಕಟ್ಟಿದ್ದಾರೆ. ಏಸು ಕ್ರಿಸ್ತ ನಮಗೆ ಕಲಿಸಿದ್ದು ಶಾಂತಿ ಮತ್ತು ಪ್ರೀತಿ ಎಂದರು.
ಕ್ರೈಸ್ತ ಮುಖಂಡ ರೋಯ್ ಕ್ಯಾಸ್ತಲಿನೋ ಮಾತನಾಡಿ, ಮತಾಂತರ ಕಾಯಿದೆ ಬರುವ ಅಗತ್ಯ ಏನಿತ್ತು? ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮ ಪ್ರಚಾರ ಮಾಡಲು ಅವಕಾಶವಿದೆ. ಕ್ರೈಸ್ತ ಅಂದರೆ ಸೇವೆಗೆ ಹೆಸರುವಾಸಿ, ಧರ್ಮ ಜಾತಿ ನೋಡದೇ ಸೇವೆ ಮಾಡುತ್ತೇವೆ. ಇತ್ತೀಚೆಗೆ ನಮ್ಮ ಜನಸಂಖ್ಯೆ ಕಡಿಮೆಯಾಗಿದೆಯೇ ವಿನಃ ಹೆಚ್ಚಾಗಲಿಲ್ಲ. ನಾವು ಮತಾಂತರ ಮಾಡಿದ್ದರೆ ಈವರೆಗೆ 2 ಪರ್ಸೆಂಟ್ ನಿಂದ 40 ಪರ್ಸೆಂಟ್ ಏರಿಕೆಯಾಗಿರುತ್ತಿತ್ತು ಎಂದರು.