ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ನಿಧನ
ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇದೇ ಡಿಸೆಂಬರ್ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು.
ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಇಂದು ಮುಂಬೈನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಬಾಲಿವುಡ್ ಆಳಿದ ದಿಗ್ಗಜ ಹಲವು ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗವನ್ನ ಆಳಿದ ಧರ್ಮೇಂದ್ರ 1935ರ ಡಿಸೆಂಬರ್ 8ರಂದು ಪಂಜಾಬ್‌ನ ಲುಧಿಯಾನದ ಸಣ್ಣ ಹಳ್ಳಿಯಲ್ಲಿ ಜನಿಸಿದ್ರು. ಕಿರಿಯ ವಯಸ್ಸಿನಲ್ಲೇ ಪ್ರಕಾಶ್ ಕೌರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗದಲ್ಲಿ ಮಿಂಚಬೇಕು, ನಟನಾಗಬೇಕು ಎಂಬ ಹಂಬಲ ಹೊಂದಿದ್ದ ಧರ್ಮೇಂದ್ರ ನಟಿಸುವುದಕ್ಕಾಗಿಯೇ ಮನೆ ಬಿಟ್ಟು ಬಂದರು. 1960ರಲ್ಲಿ ʻದಿಲ್ ಬಿ ತೇರಾ ಹಮ್ ಬಿ ತೇರೆʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರಲ್ಲದೇ ʻಶೋಲೆʼ ಸಿನಿಮಾ ಮೂಲಕ ಕರ್ನಾಟಕದೊಂದಿಗೆ ನಂಟು ಹೊಂದಿದ್ದರು. ಇವರ ಕಲಾ ಸೇವೆಗೆ 2012ರಲ್ಲಿ ಪದ್ಮ ಭೂಷಣ ಪ್ರಶಸ್ತಿಯೂ ಒಲಿದುಬಂದಿತು.




