December 18, 2025

ಮಾಣಿ: ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೆರೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ

0
image_editor_output_image-1053668834-1763722283662

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ, ಕಡೇಶಿವಾಲಯ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರ ಇದರ ಕ್ಯಾಂಪಸ್ ನಲ್ಲಿ ಇತ್ತೀಚೆಗೆ, ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಇರುವ ಒಟ್ಟು ಮೂವತ್ತು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ಸಡಗರದಿಂದ ಜರುಗಿತು.

ಕರ್ನಾಟಕದ ಸರಕಾರದ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಜರುಗುವ ಈ ಕಾರ್ಯಕ್ರಮವನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳ ಸಹಭಾಗಿತ್ವದಲ್ಲಿ ಇಲ್ಲಿನ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ಕಳೆದ, ೬.೧೧.೨೦೨೫ ರ ಶನಿವಾರ ಪೂರ್ವಾಹ್ನ 9:30 ರಿಂದ, ಸಂಧ್ಯಾ ಸಮಯ 5:30 ರವರೆಗೆ ಆಯೋಜಿಸಲಾಗಿತ್ತು.

ಪರಿಸರ ಸಂರಕ್ಷಣೆಯ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ, ಸಸಿಗೆ ನೀರೆರೆಯುವ ಮೂಲಕ, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆಯವರಾದ, ಶ್ರೀಮತಿ ಭಾರತಿ
ಇವರು ಈ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು.
ಬಳಿಕ ಶ್ರೀಯುತ ಸುಧಾಕರ್ ಭಟ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಆಮಿನಾ ಬಾನು ಅವರು ಅತಿಥಿ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು, ಕೊನೆಯಲ್ಲಿ ಶಾಲಾ ಸಂಚಾಲಕ ಶ್ರೀಯುತ ಅಬ್ದುಲ್ ಖಾದರ್ ಕುಕ್ಕಾಜೆ ರವರ ಅಧ್ಯಕ್ಷೀಯ ಭಾಷಣದ ಬಳಿಕ ಸಹ ಶಿಕ್ಷಕಿಯವರಾದ ಕುಮಾರಿ ನಿಖಿತಾರವರು ಧನ್ಯವಾದವಿತ್ತರು ಹಾಗೂ ಸಹ ಶಿಕ್ಷಕ ಹಿಂದಿ ಪ್ರಾಧ್ಯಾಪಕರಾದ, ಶ್ರೀ ಹೈದರ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಶ್ರೀ ಸುರೇಶ್ ಪೂಜಾರಿ ಕನ್ನೋಟ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕಡೇಶಿವಾಲಯ, ಶ್ರೀ ಸತೀಶ್ ರಾವ್ ಮಾಜಿ ವಲಯ ಸಂಪನ್ಮೂಲ ವ್ಯಕ್ತಿ ನಗರ ಕ್ಲಸ್ಟರ್, ಶ್ರೀ ಗುರುರಾಜ್ ಪಾಟ್ರಕೋಡಿ ಶಿಕ್ಷಕ ಸಂಘದ ಅಧ್ಯಕ್ಷರು ಬಂಟ್ವಾಳ ತಾಲೂಕು, ಶ್ರೀಮತಿ ರಾಜೇಶ್ವರಿ ಅಧ್ಯಕ್ಷರು ಮತ್ತು ಜನಾಬ್ ಝಕರಿಯಾ ದಾರಿಮಿ ಪ್ರಧಾನ ಕಾರ್ಯದರ್ಶಿಗಳು ಶಿಕ್ಷಕ ರಕ್ಷಕ ಸಂಘ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ, ಈ ಸಂಧರ್ಭ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.

ಅದೇ ದಿನ ಸಾಯಂಕಾಲ, ಕೈಗೊಳ್ಳಲಾದ ಇದರ ಸಮಾರೋಪ ಸಮಾರಂಭದಲ್ಲಿ, ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ಜನಾಬ್ ರಿಯಾಝ್ ಕಲ್ಲಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಕಲ್ಲಾಜೆ, ಜನಾಬ್ ಅಲ್ತಾಫ್ ದಾರಿಮಿ ಖತೀಬರು ಹಯಾತುಲ್ ಇಸ್ಲಾಮ್ ಜುಮಾ ಮಸೀದಿ ಪೆರ್ಲಾಪು ಮತ್ತು ಅಧ್ಯಾಪಕರು ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ, ಸಹಕರಿಸಿದ, ಭಾಗವಹಿಸಿದ ಎಲ್ಲಾ ಶಾಲೆಗಳ ಅಧ್ಯಾಪಕ ವೃಂದವನ್ನು ಶ್ಲಾಘಿಸಿ, ವಿಜೇತ ವಿದ್ಯಾರ್ಥಿಗಳನ್ನು, ಅಭಿನಂದಿಸಿದ, ಶಾಲಾ ಸಂಚಾಲಕ ಶ್ರೀಯುತ ಅಬ್ದುಲ್ ಖಾದರ್ ಕುಕ್ಕಾಜೆ ಸಾಂದರ್ಭಿಕ ನುಡಿಗಳನ್ನಾಡಿದರು ಹಾಗೂ ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ಜನಾಬ್ ರಿಯಾಝ್ ಕಲ್ಲಾಜೆಯವರು ಶುಭ ಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಸಹ ಶಿಕ್ಷಕಿಯವರಾದ ಮುಬೀನಾ ಶುಭಾನ್ ಆರಂಭದಲ್ಲಿ ಸ್ವಾಗತ ಕೋರಿ, ಕೊನೆಯಲ್ಲಿ ಧನ್ಯವಾದವಿತ್ತರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ, ಒಟ್ಟು ಏಳು ಪ್ರಶಸ್ತಿಗಳನ್ನು ಪಡೆದು ಕೆದಿಲ ಕ್ಲಸ್ಟರ್ ಮಟ್ಟದ ಚಾಂಪಿಯನ್, ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ ತನ್ನದಾಗಿಸಿಕೊಂಡಿತು. ಒಟ್ಟು ಐದು ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೆದಿಲ  ದ್ವಿತೀಯ ಸ್ಥಾನವನ್ನು ಗಳಿಸಿತು. ದ.ಕ. ಹಿರಿಯ ಪ್ರಾಥಮಿಕ ಶಾಲೆ, ಪಾಟ್ರಕೋಡಿ ನಾಲ್ಕು ಪ್ರಶಸ್ತಿಗಳನ್ನು ಪಡೆದು
ತೃತೀಯ ಸ್ಥಾನವನ್ನು ಪಡೆಯಿತು.

ಕಡೇಶಿವಾಲಯ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಶಾಲೆ ಕಡೇಶಿವಾಲಯ ಇವರು ಒಟ್ಟು ಹದಿನೈದು ಪ್ರಶಸ್ತಿಗಳಿಗೆ ಭಾಜನರಾಗಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ, ದ.ಕ. ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಪಲ್ಕೆರವರು ದ್ವಿತೀಯ ಸ್ಥಾನಿಯಾಗಿ ಮಿಂಚಿದರು ಹಾಗೂ ಮಿಕ್ಕಿದ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇರಾ ತೃತೀಯ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಂಡರು.

ಅಲ್ಲದೆ, ಚಿತ್ರಕಲಾ, ಕವನ ವಾಚನ ಹಾಗೂ ಮಿಮಿಕ್ರಿ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನವನ್ನು ಪಡೆದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇಲ್ಲಿನ ಮೂವರು ವಿದ್ಯಾರ್ಥಿಗಳಾದ, ಏಳನೇ ತರಗತಿಯ ಅನ್ಸಾಮ್ ಹಾಗೂ ನಿಷ್ಫಾ ಮತ್ತು ಆರನೇ ತರಗತಿಯ ಝಿಯಾನ್ ಮುಂದಿನ ಸುತ್ತಿನ ತಾಲೂಕು ಮಟ್ಟದಲ್ಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದರು. ವಿಜೇತರೆಲ್ಲರಿಗೂ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಬಹುಮಾನ ವಿತರಿಸಲಾಯಿತು.

ಕ್ಲಸ್ಟರ್ ಮಟ್ಟದ ಈ ಸ್ಪರ್ಧೆಯಲ್ಲಿ, ಕಡೇಶಿವಾಲಯ ಕ್ಲಸ್ಟರ್ ಉಸ್ತುವಾರಿಯನ್ನು, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇಲ್ಲಿನ ಸಹ ಶಿಕ್ಷಕಿಯವರಾದ ಶ್ರೀಮತಿ ಸಿನಾನ ವಹಿಸಿಕೊಂಡರು ಹಾಗೂ ಶ್ರೀಮತಿ ಅಲಿಮತ್ ಸಅದಿಯ ಸಹ ಶಿಕ್ಷಕಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಇವರು ಕೆದಿಲ ಕ್ಲಸ್ಟರ್ ಗೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!