March 18, 2026

ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ: 42 ಮಂದಿ ಹೈದರಾಬಾದ್ ಮೂಲದ ಯಾತ್ರಿಕರು ಮೃತ್ಯು ಶಂಕೆ!

0
Bus-1_V_jpg-442x260-4g.webp

ಹೈದರಾಬಾದ್: ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಭೀಕರ ದುರಂತದಲ್ಲಿ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮುಫ್ರಿಹತ್ ಪ್ರದೇಶದ ಬಳಿ ಭಾರತೀಯ ಕಾಲಮಾನ ಬೆಳಗಿನ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ ಎಂದು english.mathrubhumi.com ವರದಿ ಮಾಡಿದೆ.

ದುರಂತಕ್ಕೆ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಮೃತಪಟ್ಟವರೆಲ್ಲರೂ ಹೈದರಾಬಾದ್‌ನವರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದುರಂತದ ವೇಳೆಗೆ ಬಸ್‌ನಲ್ಲಿ ಸುಮಾರು 20 ಮಹಿಳೆಯರು, 11 ಮಕ್ಕಳು ಇದ್ದರು ಎಂದು ಮೂಲಗಳು ತಿಳಿಸಿವೆ.

ಮಕ್ಕಾದಲ್ಲಿ ಉಮ್ರಾ ವಿಧಿಗಳನ್ನು ನೆರವೇರಿಸಿ ಮದೀನಾಕ್ಕೆ ತೆರಳುತ್ತಿದ್ದ ಯಾತ್ರಿಕರಲ್ಲಿ ಅನೇಕರು ಡಿಕ್ಕಿ ಸಂಭವಿಸಿದ ಸಂದರ್ಭ ನಿದ್ರಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ಸೂಚಿಸಿವೆ.

ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗದಿದ್ದರೂ, ಸ್ಥಳೀಯ ಮೂಲಗಳು 42ಮಂದಿ ಮೃತಪಟ್ಟಿದ್ದಾರೆ ವರದಿ ಮಾಡಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಅಪಘಾತದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಗೊಂಡಿದ್ದು, ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!