ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್ ಹಾಗೂ ಉಡುಪಿಯ ಕಾಪು ಪುರಸಭೆ ಸೇರಿದಂತೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಸೋಮವಾರ (ಡಿ. 27) ಮತದಾನ ನಡೆಯಲಿದೆ. ವಿವಿಧ ಪಕ್ಷಗಳ 3,440 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯತ್ ಸಹಿತ ಒಟ್ಟು 58 ನಗರ ಸ್ಥಳೀಯ ಸಂಸ್ಥೆಗಳ 1,185 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. 1,577 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕಾರಣಗಳಿಗೆ ತೆರವಾಗಿರುವ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಿಗೂ ಇದೇ ವೇಳೆ ಉಪಚುನಾವಣೆ ನಡೆಯಲಿದೆ.
5,138 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಬಿಜೆಪಿಯ 1,048, ಕಾಂಗ್ರೆಸ್‌ನ 1,047, ಜೆಡಿಎಸ್‌ನ 244 ಹಾಗೂ ಪಕ್ಷೇತರರು 910 ಸೇರಿ ಒಟ್ಟು 3,440 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ. 30ರಂದು ಫಲಿತಾಂಶ ಪ್ರಕಟವಾಗಲಿದೆ.