8 ದಿನದ ಹಿಂದಷ್ಟೇ ಹುಟ್ಟಿದ ಹಸುಗೂಸು, 2 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ
ಮಡಿಕೇರಿ: ಆಕೆ ತನ್ನ ತವರು ಮನೆಗೆ ಹೆರಿಗೆಗೆಂದು ಬಂದಿದ್ದಳು. 8 ದಿನದ ಹಿಂದೆಯಷ್ಟೇ ಸುಂದರ ಹೆಣ್ಣು ಮಗುವೊಂದು ಜನಿಸಿತ್ತು. ಆದ್ರೆ ಅದೇನಾಗಿತ್ತೋ ಏನೋ ಮನೆಯವರು ಹೊರಗೆ ಕೆಲಸ ಮಾಡುವಾಗ ಇತ್ತ ಎರಡು ಪುಟ್ಟ ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆಗೆ ತಾಯಿ ಶರಣಾಗಿದ್ದಾಳೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಕಟುಕನಿಗೂ ಕರುಳು ಹಿಂಡುವಂತಿದೆ.
ಘಟನೆ ಕಂಡು ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಟ್ಟದಪುರ ಮುಸ್ಲಿಂ ಬ್ಲಾಕ್ ನಿವಾಸಿ ರಬಿಯಾ ಭಾನು (21) ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತಳಿಗೆ 2 ವರ್ಷದ ಅನಮ್ ಫಾತಿಮಾ ಎಂಬ ಹೆಣ್ಣುಮಗಳಿದ್ದಳು. ಮತ್ತೊಂದು ಮಗು 8 ದಿನಗಳ ಹಿಂದಷ್ಟೇ ಜನಿಸಿತ್ತು. ತವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳ ಕತ್ತು ಕೊಯ್ದು ಕೃತ್ಯ ಎಸಗಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, ರಬಿಯಾ ಭಾನು ಅವರ ಮೊದಲ ಮಗಳು 2 ವರ್ಷದವಳಿದ್ದು, ಅಂಗವಿಕಲೆಯಾಗಿದ್ದಳು. ಕುಟುಂಬದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಆಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ, ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಶಂಕೆಯಿದೆ. ಆದ್ರೆ ಇದು ಕೇವಲ ಊಹೆ. ಆಕೆ ಎಂದಿನಂತೆ ಮನೆಯಲ್ಲಿ ಲವಲವಿಕೆಯಿಂದಲೇ ಇದ್ದಳು. ತಂದೆ ಹಾಗೂ ಸಹೋದರ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಕ್ಕಳನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.




