ಆದಾಯವೇ ಇಲ್ಲ, ಸಚಿವ ಸ್ಥಾನ ಬೇಡ, ನಾನು ಮತ್ತೆ ನಟನೆ ಮಾಡ್ತೇನೆ: ಸಂಸದ ಸುರೇಶ್ ಗೋಪಿ ಘೋಷಣೆ
ಕಣ್ಣೂರು: ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ತಮ್ಮ ಸಿನಿಮಾ ವೃತ್ತಿಜೀವನವನ್ನು ಮುಂದುವರಿಸಲು ಬಯಸುವುದಾಗಿ ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸ್ಥಾನ ತಮಗೆ ಬೇಡ. ನಟನೆಗೆ ಮತ್ತೆ ಮರಳುವುದಾಗಿ ಘೋಷಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಮತ್ತು ನಟ-ರಾಜಕಾರಣಿಯಾಗಿರುವ ಅವರು, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಆದಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ಸಿನಿಮಾ ವೃತ್ತಿಜೀವನವನ್ನು ತೊರೆದು ಸಚಿವನಾಗಲು ತಮಗೆ ಇಷ್ಟವಿರಲಿಲ್ಲ ಎಂದಿರುವ ಅವರು, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ, ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದರು.




