ವಿಟ್ಲ: ಸಮೀಪದ ಸಹಕಾರಿ ಸಂಘದಲ್ಲಿ ಚಿನ್ನಭರಣ ಸಾಲ ನೀಡುವ ವೇಳೆ ಭಾರೀ ಅಕ್ರಮ: ಸಿ ಗ್ರೇಡ್ ಸದಸ್ಯೆ ಯುವತಿಗೆ 7.5 ಕೋಟಿ ರೂ. ಸಾಲ ನೀಡಿದ ಸಹಕಾರಿ ಸಂಘ
ವಿಟ್ಲ: ಹೋಬಳಿಯ ಮಾದರಿ ಸಹಕಾರಿ ಸಂಘವೊಂದರಲ್ಲಿ ಚಿನ್ನಭರಣ ಅಡಮಾನ ಸಾಲ ನೀಡುವ ಸಂದರ್ಭ ನಿಬಂಧನೆಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದ್ದು, ಸೊಸೈಟಿಯ ಸದಸ್ಯರೊಬ್ಬರು ಸಹಕಾರ ಇಲಾಖೆಯ ಮೈಸೂರು ಉಪ ವಿಭಾಗದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿರುವ ಪ್ರತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಟ್ಲ-ಪುತ್ತೂರು ರಸ್ತೆಯ ಕಂಬಳಬೆಟ್ಟು ಸಮೀಪದಲ್ಲಿರುವ ಸಹಕಾರಿ ಸಂಘದಲ್ಲಿ ’ಸಿ’ ಗ್ರೇಡ್ ಸದಸ್ಯತ್ವ ಹೊಂದಿರುವ ಯುವತಿಯೊಬ್ಬರಿಗೆ ನಿಯಮ ಬಾಹಿರವಾಗಿ ೭.೫ ಕೋಟಿ ರೂ. ಮೊತ್ತದ ಸಾಲವನ್ನು ಕೆಲವು ತಿಂಗಳ ಹಿಂದೆ ನೀಡಲಾಗಿದೆ. ವಾರದಿಂದ ಈ ಪ್ರಕರಣ ಗ್ರಾಮದ ಪ್ರಮುಖರ ಕಿವಿಗೆ ಬಿದ್ದು, ಎಲ್ಲೆಡೆ ಸುದ್ದಿ ಓಡಾಡುತ್ತಿದೆ. ಹಲವು ಇಲಾಖೆಗಳಿಗೆ ಈ ಬಗ್ಗೆ ದೂರು ನೀಡಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ, ಜಿಲ್ಲಾ ಸಹಾಯಕ ರಿಜಿಸ್ಟ್ರಾರ್ ಕಚೇರಿಯ ಇಬ್ಬರು ಸಿಬ್ಬಂದಿಗಳು ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನ ಉಸ್ತುವಾರಿ ಬುಧವಾರ ಸಂಘ ಪ್ರಧಾನ ಕಛೇರಿಗೆ ದಿಢೀರ್ ಭೇಟಿ ನೀಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯಲ್ಲಿ ಕೆಲವು ಗಂಟೆ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ಸಹಕಾರಿ ಸಂಸ್ಥೆಗೆ ಹಾಗೂ ಇನ್ನೊಬ್ಬರಿಗೆ ಇದೇ ರೀತಿಯಲ್ಲಿ ೩ ಕೋಟಿಗಿಂತ ಮೇಲ್ಪಟ್ಟ ಸಾಲ ನೀಡಲಾಗಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬರುತ್ತಿವೆ.
ವೈರಲ್ ಆದ ಪತ್ರದಲ್ಲಿ ಏನಿದೆ?
ಸೊಸೈಟಿಯ ’ಸಿ’ ಗ್ರೇಡ್ ಸದಸ್ಯರೊಬ್ಬರು ಅನಧಿಕೃತವಾಗಿ ೭.೫ ಕೋಟಿ ರೂ. ಸಾಲ ಪಡೆದಿದ್ದು, ಸೊಸೈಟಿಯ ಇತರ ಸದಸ್ಯರಿಗೆ ಈ ವಿಷಯ ತೀವ್ರ ಆತಂಕ ಮೂಡಿಸಿದೆ. ಈ ಸಾಲ ವಿತರಣೆಯು ಸೊಸೈಟಿಯ ನಿಜವಾದ ಸದಸ್ಯರ ಯಾವುದೇ ಅನುಮತಿ ಅಥವಾ ಅಧಿಕಾರವಿಲ್ಲದೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. “ಇದು ವೈಯಕ್ತಿಕ ಲಾಭಕ್ಕಾಗಿ ಸೊಸೈಟಿಯ ಹೆಸರು ಮತ್ತು ಅದರ ಆರ್ಥಿಕ ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಂಡಿರುವ ಸ್ಪಷ್ಟ ಆರ್ಥಿಕ ವಂಚನೆಯ ಕೃತ್ಯ” ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬೃಹತ್ ಮೊತ್ತದ ವಂಚನೆಯು ಸೊಸೈಟಿಯಲ್ಲಿ ಭಾರಿ ಅಪನಂಬಿಕೆ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗಿದೆ. ಸಂಬಂಧಿಸಿದ ಸೊಸೈಟಿಯ ಎಲ್ಲಾ ಆರ್ಥಿಕ ದಾಖಲೆಗಳು ಮತ್ತು ಸಾಲ ವಿತರಣೆಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಮನವಿ ಮಾಡಿದ್ದಾರೆ.





