ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು : ತನ್ನ ಆದೇಶ ಉಲ್ಲಂಘಿಸಿದ ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್ವೆಲ್ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಿಸಿ ಶರಣ್ ಪಂಪ್ವೆಲ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು.
ಸೆ.13ರಂದು ಮಹಾಗಣಪತಿ ಶೋಭಾಯಾತ್ರೆ ವೇಳೆ ದರ್ಶನಕ್ಕೆ ಮಾತ್ರ ಬೆಳಗ್ಗೆ 10:30 ರಿಂದ 12:30ರ ವರೆಗೆ ಕೋರ್ಟ್ ಅವಕಾಶ ಕಲ್ಪಿಸಿತ್ತು. ಆದ್ರೆ ಪಂಪ್‌ವೆಲ್ 12:45ರ ವರೆಗೆ ಶೋಭಾಯಾತ್ರೆಯಲ್ಲೂ ಭಾಗಿಯಾಗಿದ್ದರು.
ಅಲ್ಲದೇ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇದರಿಂದ ಆದೇಶ ಉಲ್ಲಂಘನೆ ಬಗ್ಗೆ ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಬಳಿಕ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿತು. ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ, ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್ ಆದೇಶ ಹೊರಡಿಸಿದೆ.




