ಬಂಟ್ವಾಳ: ಕೊಳ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಆರೋಪಿ ಭರತ್ ಕುಮ್ದೇಲ್ ನ್ಯಾಯಾಲಯಕ್ಕೆ ಶರಣು
ಮಂಗಳೂರು: ಮೇ 27ರಂದು ನಡೆದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಮತ್ತು 2017ರಲ್ಲಿ ನಡೆದಿದ್ದ SDPI ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಮತ್ತು ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮೇ 27 ರಂದು ಬಂಟ್ವಾಳ ತಾಲೂಕಿನಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ನಡೆದ ಬಳಿಕ ಭರತ್ ಕುಮ್ಡೇಲ್ ತಲೆಮರೆಸಿಕೊಂಡಿದ್ದ. ಈ ಮಧ್ಯೆ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ವಿಚಾರಣೆಗೂ ಹಾಜರಾಗಿರಲಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ಸತತವಾಗಿ ವಿಚಾರಣೆಗೆ ಗೈರಾಗಿದ್ದಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.
ಮೇ 27ರಂದು ಬಂಟ್ವಾಳ ತಾಲೂಕಿನಲ್ಲಿ ಅಬ್ದುಲ್ ರೆಹಮಾನ್ ಅವರನ್ನು ಹತ್ಯೆ ನಡೆದಿತ್ತು. ರೆಹ್ಮಾನ್ ಜೊತೆಯಲ್ಲಿದ್ದ ಸ್ನೇಹಿತ ಕಲಂದರ್ ಶಾಫಿ ಕೊಲೆಯತ್ನ ನಡೆದಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 13 ಮಂದಿ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಭರತ್ ರಾಜ್ ಯಾನೆ ಭರತ್ ಕುಮ್ಡೇಲು ಕಳೆದ ನಾಲ್ಕುವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ. ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದರು. ಇಂದು ಭರತ್ ಕುಮ್ಡೇಲು ನ್ಯಾಯಾಲಯದ ಮುಂದೆ ಶರಣಾಗಿದ್ದು, ನ್ಯಾಯಾಲಯವು ಆರೋಪಿಗೆ ಅ. 25ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಭರತ್ ಕುಮ್ಡೇಲ್ ಸೇರಿ 14 ಆರೋಪಿಗಳ ವಿರುದ್ಧ ಕೋಕಾ ಕೇಸ್:
ಕೊಳತ್ತಮಜಲು ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲ 14 ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ ಆ್ಯಕ್ಟ್) ಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಬಂಟ್ವಾಳ ಗ್ರಾಮಾಂತರ ಪೊಲೀಸರು ದೀಪಕ್, ಚಿಂತನ್, ಪೃಥ್ವಿರಾಜ್ ಜೋಗಿ, ಸುಮಿತ್ ಬಿ. ಆಚಾರ್ಯ, ವಿ. ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ಶೃಂಗೇರಿ ಮೂಲದ ರವಿಸಂಜಯ್ ಜಿ.ಎಸ್., ಶಿವಪ್ರಸಾದ್ ತುಂಬೆ, ಪ್ರದೀಪ, ಶಾಹಿತ್ ಯಾನೆ ಸಾಹಿತ್, ಸಚಿನ್ ಯಾನೆ ಸಚ್ಚು ರೊಟ್ಟಿಗುಡ್ಡೆ ಹಾಗೂ ರಂಜಿತ್, ಭರತ್ ಕುಮ್ಡೇಲು ಸೇರಿ ಒಟ್ಟು 14 ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.




