ಸುರತ್ಕಲ್: ವಾಹನ ಕಳವು ಆರೋಪಿಯ ಬಂಧನ
ಸುರತ್ಕಲ್ : ಸುರತ್ಕಲ್ ಪೊಲೀಸ್ ಠಾಣೆ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಕಳವು ಗೈದಿದ್ದ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಸೊತ್ತು ಸಹಿತ ಬಂಧಿಸಿದ್ದಾರೆ.
ಬಂಧಿತನನ್ನು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ರಾತಿಕ್ಕಲ್ ವರ್ಕಲಾ ಗ್ರಾಮದ ನಿವಾಸಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ (29) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2025ರ ಸೆ. 30ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ನಿವಾಸಿ ಸುಕುಮಾರ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದ ಪೊಲೀಸರು ಅ.7ರಂದು ಬೈಕ್‌ವೊಂದರಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಯನ್ನು ತಿರುವನಂತಪುರಂ ನಿವಾಸಿ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್(29) ಎಂದು ಗುರುತಿಸಲಾಗಿದೆ. ಆತ ಚಲಾಯಿಸುತ್ತಿದ್ದ ಬೈಕ್‌ಗೆ ಯಾವುದೇ ದಾಖಲಾತಿಗಳಿಲ್ಲದೇ ಇದ್ದು, ಬೈಕ್‌ನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಾರಂ ಮಾಲ್ ಬಳಿಯಿಂದ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವ್ಯಕ್ತಿ ಅ.30ರಂದು ಕುಳಾಯಿ ಬಳಿಯಿಂದ KA-19-AE-8017 ನೇ ನಂಬ್ರದ ಪಿಕಪ್ ವಾಹನವನ್ನು ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು ಈ ಎರಡು ವಾಹನಗಳನ್ನು ಸ್ವಾಧೀನಪಡಿಸಲಾಗಿದೆ.




