ಕೆಮ್ಮಣಗುಂಡಿ: ಸೆಲ್ಪಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದ ಶಿಕ್ಷಕ ಸಾವು
ಚಿಕ್ಕಮಗಳೂರು: ಪ್ರವಾಸಕ್ಕೆ ಬಂದ ವೇಳೆ ಸೆಲ್ಪಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಶಿಕ್ಷಕರೊಬ್ಬರು ಸಾವನಪ್ಪಿದ ಘಟನೆ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದೆ. ಸಂತೋಷ್ (40) ಮೃತ ವ್ಯಕ್ತಿ. ಸಂತೋಷ್ ಶಿಕ್ಷಕರಾಗಿದ್ದರು. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕ ಸಂತೋಷ್ ಮತ್ತು ಹೆಂಡತಿ ಶ್ವೇತ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ನೋಡಲು ಶನಿವಾರ ಬಂದಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಣೆ ಮಾಡಿದ ದಂಪತಿ, ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್ ಬಳಿ ಹೋಗಿದ್ದಾರೆ.
ಪ್ರಕೃತಿ ಸೌಂದರ್ಯದ ನಡುವೆ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಸಂತೋಷ್ ಮುಂದಾಗಿದ್ದರು. ಪ್ರಪಾತದ ತುದಿಯಲ್ಲಿ ನಿಂತಿದ್ದ ಸಂತೋಷ್ ಕಾಲು ಜಾರಿ ನೂರಾರು ಅಡಿ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಕಲ್ಲು ಬಂಡೆಗಳು ಬಡಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತ ಶಿಕ್ಷಕ ಸಂತೋಷ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಶ್ವೇತ ಜೊತೆ ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದರು.




