ಪೆರುವಾಯಿ ವಿಚಾರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಆರೋಪ: ಮಾಣಿಲದಲ್ಲಿ ಬಿಜೆಪಿ ಮುಖಂಡ ಮಹೇಶ್ ಭಟ್ ಅತ್ಯಾಚಾರ ಪ್ರಕರಣ ದಾಖಲಾದಾಗ ಬಿಜೆಪಿಗರು ಎಲ್ಲಿಗೆ ಹೋಗಿದ್ದರು? ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಪ್ರಶ್ನೆ
ವಿಟ್ಲ: ಬಿಜೆಪಿ ಅಧಿಕಾರದಲ್ಲಿರುವ ಸಂಘ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರ ಬಗ್ಗೆ ಚಕಾರ ಎತ್ತದ ಬಿಜೆಪಿ ಪದಾಧಿಕಾರಿಗಳು ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಕಾರ್ಯ ಮಾಡುವುದನ್ನು ಬಿಟ್ಟು ಅವರ ಮನೆಯಲ್ಲಿ ನಡೆಯುತ್ತಿರುವುದನ್ನು ಸರಿಪಡಿಸುವ ಕೆಲಸ ಮಾಡಲಿ. ಪಂಚಾಯಿತಿ ಜನಪ್ರತಿನಿಧಿಗಳು ಪಕ್ಷಾತೀತವಾಗಿದ್ದು, ಕಾಂಗ್ರೇಸ್ ಪಕ್ಷದ ಮೇಲೆ ಆರೋಪ ಹಾಕಿರುವುದು ಖಂಡನೀಯ. ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಗೌರವ ನೀಡಬೇಕಾಗುತ್ತದೆ ಎಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.
ಮಾಣಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೬ ವರ್ಷದ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಿರುಕುಳ ನೀಡಿದ ಬಗ್ಗೆ ಪೆರುವಾಯಿ ವ್ಯವಸಾಯ ಸಂಘದ ನಿರ್ದೇಶಕ ಮಹೇಶ್ ಭಟ್ ಮೇಲೆ ೨೦೨೫ ರ ಮಾ.೨೪ ರಂದು ಪೊಕ್ರೋ ಪ್ರಕರಣ ದಾಖಲಾಗಿದೆ. ಈ ಸಂದರ್ಭ ಬಿಜೆಪಿಯವರು ಎಲ್ಲಿಗೆ ಹೋಗಿದ್ದರು? ಈ ಬಗ್ಗೆ ಏನು ಕ್ರಮವನ್ನು ತೆಗೆದುಕೊಳ್ಳಲಾಗಿದೆ? ನಿರ್ದೇಶಕ ಸ್ಥಾನದಿಂದ ತೆರವು ಮಾಡುವ ಕಾರ್ಯಕ್ಕೆ ಯಾಕೆ ಮುಂದಾಗಿಲ್ಲ? ಆಗ ಬಿಜೆಪಿಗೆ ನೈತಿಕತೆ ಇರಲಿಲ್ವಾ? ಪೆರುವಾಯಿ ವ್ಯವಸಾಯ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದ ಬಗ್ಗೆ ಲೋಕಾಯುಕ್ತ ಹಾಗೂ ಸಹಕಾರಿ ಇಲಾಖಾ ತನಿಖೆ ನಡೆಸಬೇಕೆಂದು ಸಂಘದ ಸದಸ್ಯರು ದೂರು ಈ ಹಿಂದೆಯೇ ನೀಡಿರುತ್ತಾರೆ. ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸುವ ಕಾರ್ಯ ಯಾಕೆ ಮಾಡುತ್ತಿಲ್ಲ? ಆಡಿಟ್ ರಿಪೋರ್ಟ್ ಮಾಡುವಾಗ ಕಂಡು ಬಂದ ನ್ಯೂನತೆಗಳನ್ನು ಯಾಕೆ ಬಹಿರಂಗ ಪಡಿಸುತ್ತಿಲ್ಲ? ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಎಂ. ಎಸ್. ಮಹಮ್ಮದ್ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿ ರಮಾನಾಥ ವಿಟ್ಲ, ವಲಯ ಕಾಂಗ್ರೇಸ್ ಅಧ್ಯಕ್ಷ ರಾಜೇಂದ್ರ ರೈ ಪೆರುವಾಯಿ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು ಉಪಸ್ಥಿತರಿದ್ದರು.




