ಬೆಳ್ತಂಗಡಿ: ಬಂಗ್ಲೆಗುಡ್ಡೆ ಶವ ಶೋಧ ಕಾರ್ಯಕ್ಕೆ ಹೈಕೋರ್ಟ್ ಮೆಟ್ಟಿಲೇರಿದ ಪುರಂದರ ಗೌಡ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಇತ್ತೀಚೆಗೆ ಸ್ಥಳೀಯ ನಿವಾಸಿಗಳಿಬ್ಬರು ಗುರುತಿಸಿರುವ ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವಂತೆ ಹಾಗೂ ಶವಗಳ ಉತ್ಖನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಎಸ್ಐಟಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಧರ್ಮಸ್ಥಳ ಗ್ರಾಮದ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಧರ್ಮಸ್ಥಳ ಸಾಮೂಹಿಕ ಅಂತ್ಯ ಸಂಸ್ಕಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರಿಗೆ ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ (ಸೆಪ್ಟೆಂಬರ್ 18ಕ್ಕೆ) ಮುಂದೂಡಿತು.




