ಉಡುಪಿ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಮೋಸ: ಮತ್ತೆ ಇಬ್ಬರು ಆರೋಪಿಗಳ ಅರೆಸ್ಟ್
ಉಡುಪಿ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 2 ಲ.ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮೈಸೂರಿನ ಶೋಯಬ್ ಅಹಮದ್(28), ಮುದ್ದಾಸಿರ್ ಅಹಮದ್(40) ಬಂಧಿತರು. ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದ 2,00,000 ರೂ. ಹಣ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಪ್ರಕರಣದ ವಿವರ
ಅಂಬಾಗಿಲು ನಿವಾಸಿ ತೀರ್ಥರಾಜ ಶೆಣೈ ಅವರನ್ನು ಕ್ಯಾಪಿಟಲ್ ಗ್ರೈನ್ಸ್ ಕ್ರಿವ್ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಆದಿ ನಿಹಾಲ್ ಎಂಬ ಅಪರಿಚಿತ ವ್ಯಕ್ತಿಯು ಸೇರ್ಪಡೆ ಮಾಡಿದ್ದ. ಬಳಿಕ ಫಿಡಿಲಿಟಿ ಇನ್‌ಸ್ಟಿಟ್ಯೂಷನಲ್ ಪಾಟ್ನರ್ ಎಫ್-101 ಗ್ರೂಪ್‌ಗೆ ಸೇರಿಸಿದ್ದ. ಆ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಮಾಹಿತಿ ತಿಳಿಸಿದ್ದ. ಅದನ್ನು ನಂಬಿದ ತೀರ್ಥರಾಜ ಶೆಣೈ ಅವರ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಯಿಂದ ದಿನಾಂಕ ಡಿ.19ರಿಂದ ಜ.7ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 44,00,000 ರೂ. ಹಣವನ್ನು ಹೂಡಿಕೆ ಮಾಡಿದ್ದು, ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶ ನೀಡದೇ ನಷ್ಟ ಉಂಟು ಮಾಡಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್ ಮತ್ತು ಸಹಾಯಕ ಪೊಲೀಸ್ ಉಪಾಧೀಕ್ಷಕಿ ಡಾ| ಹರ್ಷ ಪ್ರಿಯಂವದ ನಿರ್ದೇಶನದ ಮೇರೆಗೆ ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಠಾಣಾ ಸಿಬಂದಿಗಳಾದ ರಾಜೇಶ್, ವೆಂಕಟೇಶ್ ಜಂತ್ರ, ರಾಘವೇಂದ್ರ, ಪವನ್, ದೀಕ್ಷಿತ್, ನೀಲೇಶ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.




