ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳೆಯಿಂದ ಹಲ್ಲೆ: ವ್ಯಾಪಕ ಆಕ್ರೋಶ
ಬೆಂಗಳೂರು: ಫುಡ್ ಡೆಲಿವರಿ ಬಾಯ್‌ನನ್ನ ಮಹಿಳೆಯೊಬ್ಬಳು ಕುತ್ತಿಗೆ ಹಿಡಿದು ಹೊರ ದಬ್ಬಿದ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಜಯ್ ಎಂಬ ಡೆಲಿವರಿ ಬಾಯ್ ಫುಡ್ ಪ್ಯಾಕೇಟ್ ಪಡೆಯಲು ಬಂದಿದ್ದ. ಪುಡ್ ಡೆಲಿವರಿಗೆ ತಡವಾಗ್ತಿದೆ ಎಂದಿದಕ್ಕೆ ಮಹಿಳೆ ಥಳಿಸಿದ್ದ ಘಟನೆ ನಡೆದಿದೆ.
ಈ ವೇಳೆ ಪುಡ್ ಪ್ಯಾಕೆಟ್ ಕೊಡಲು ತಡವಾದ ಹಿನ್ನಲೆ ಸಂಜಯ್ ಮಹಿಳೆಯನ್ನು ಪ್ರಶ್ನಿಸಿದ್ದ. ಗ್ರಾಹಕರಿಗೆ ತಲುಪಿಸಲು ತಡವಾಗ್ತಿದೆ ಅಂತಾ ಸಂಜಯ್ ಹೇಳಿದ್ದಕ್ಕೆ ಕೋಪಿತಗೊಂಡ ಮಹಿಳೆ ಹಲ್ಲೆ ಮಾಡಿದ್ರು ಎನ್ನಲಾಗಿದೆ. ಈ ಕುರಿತ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನಿರಂತರವಾಗಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳನ್ನು ತಡೆಯಬೇಕಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ಡೆಲಿವರಿ ಬಾಯ್ ಕೊರಳ ಪಟ್ಟಿಯನ್ನು ಹಿಡಿದ ಮಹಿಳೆ ಹೋಟೆಲ್ ನಿಂದ ಹೊರಕ್ಕೆ ಎಳೆದು ತಂದು, ನಡು ರಸ್ತೆಗೆ ನೂಕಿದ ದೃಶ್ಯಗಳನ್ನು ಕಾಣಬಹುದಾಗಿದೆ. ಈ ವೇಳೆ ಯುವಕ ಮಹಿಳೆ ಬಳಿ ತಾಳ್ಮೆಯಿಂದ ನಡೆದುಕೊಳ್ಳುವಂತೆ ಮನವಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.





