ನಿರ್ಣಾಯಕ ಹಂತಕ್ಕೆ ತಲುಪಿದ ಧರ್ಮಸ್ಥಳದ ಶವ ಶೋಧ ಕಾರ್ಯ: 6 ನೇ ದಿನದ ಕಾರ್ಯಾಚರಣೆ ಮತ್ತೆ ಆರಂಭ
ಮಂಗಳೂರು: ಧರ್ಮಸ್ಥಳದ ಶವ ಶೋಧ ಕಾರ್ಯ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಭಾನುವಾರದ ವಿರಾಮದ ಬಳಿಕ, ಸೋಮವಾರ 6 ನೇ ದಿನದ ಕಾರ್ಯಾಚರಣೆ ಮತ್ತೆ ಆರಂಭ ಆಗಲಿದೆ.
ಈಗಾಗಲೇ ದೂರುದಾರ ಅನಧಿಕೃತವಾಗಿ ಶವ ಹೂತಿದ್ದೇನೆಂದು ದೂರುಕೊಟ್ಟ 10 ಸ್ಥಳಗಳಲ್ಲಿ ಶೋಧಕಾರ್ಯ ಮುಗಿದಿದೆ. ಇಂದಿನಿಂದ 11, 12 ಹಾಗೂ 13 ನೇ ಸ್ಥಳದ ಶೋಧಕಾರ್ಯ ನಡೆಯಲಿದೆ. ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಬಂದು ಎಸ್ ಐಟಿ ಅಧಿಕಾರಿಗಳು ಹಾಗೂ ದೂರುದಾರ ಬರಲಿದ್ದಾರೆ. ಧರ್ಮಸ್ಥಳ ಹಾಗೂ ಉಜಿರೆ ಮಾರ್ಗದ ಪಕ್ಕದಲ್ಲಿಯೇ ಇನ್ನು ಮುಂದಿನ 3 ಜಾಗಗಳು ಇವೆ.
ಈ ವರೆಗೆ ದೂರುದಾರ ತೋರಿಸಿದ 6 ನೇ ಸ್ಥಳದಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಹೊರತಾಗಿ ಯಾವ ಸ್ಥಳದಲ್ಲಿಯೂ ಅಸ್ಥಿಪಂಜರದ ಕುರುಹು ಸಿಕ್ಕಿರಲಿಲ್ಲ. ಇದೀಗ 13 ನೇ ಜಾಗದಲ್ಲಿ ಬಹಳ ಹೆಣ ಹೂತಿದ್ದೇನೆ, ಅಸ್ಥಿ ಪಂಜರ ಸಿಕ್ಕೇಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ದೂರುದಾರ ಇದ್ದಾನೆಂದು ಹೇಳಲಾಗಿದೆ. ಹೀಗಾಗಿ ಕೊನೆ ಸ್ಪಾಟ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿದೆ.




