ಚಿಕ್ಕಮಗಳೂರು: ಮಗ ನದಿಗೆ ಬಿದ್ದು ಸಾವು: ಮನನೊಂದು ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ
ಚಿಕ್ಕಮಗಳೂರು: ಮಗ ನದಿಗೆ ಬಿದ್ದು ಸಾವಿನ್ನಪ್ಪಿದಕ್ಕೆ ಮನನೊಂದು ಮಗನ ಮೃತದೇಹ ಸಿಗುವ ಮುನ್ನವೇ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಕಳಸ ತಾಲ್ಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.
ಮಹಿಳೆ ರವಿಕಲಾ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಇವರ ಪುತ್ರ ಶಮಂತ್ ನೀರಿಗೆ ಬಿದ್ದು ಸಾವನ್ನಪ್ಪಿದ ಯುವಕ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಜೀಪ್ ಕಂಟ್ರೋಲ್ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಭದ್ರಾ ನದಿಗೆ ಜೀಪ್ ಸಹಿತ ಆತ ಉರುಳಿ ಬಿದ್ದಿದ್ದಾನೆ.
ನಿರಂತರ ಮಳೆಯಿಂದಾಗಿ ಜೀಪನ್ನು ಮೇಲಕ್ಕೆತ್ತುವ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು. ಆತನ ಮೃತದೇಹ ಸಿಗುವ ಮುನ್ನವೇ ನೊಂದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





