ಮಂಗಳೂರು: ಅಶ್ರಫ್ ಗುಂಪು ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಮಂಗಳೂರು: ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ವಜಾಗೊಳಿಸಿದೆ.
ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 21 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕೋಟಿಮುರ, ಮನೀಷ್ ಶೆಟ್ಟಿ, ಪ್ರದೀಪ್ ಕುಮಾರ್, ವಿವಿಯನ್ ಅಲ್ವಾರಿಸ್, ಶ್ರೀದತ್ತಾ, ಧನುಷ್, ಕಿಶೋರ್ ಕುಮಾರ್ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗಿದ್ದು, ಸರಕಾರದ ಪರವಾಗಿ ನೇಮಿಸಲಾಗಿರುವ ವಿಶೇಷ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ. ಅದರಂತೆ ಹೈಕೋರ್ಟ್ ಈ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ಎ.24ರಂದು ಅಪರಾಹ್ನ 3ಕ್ಕೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಗುಂಪು ಹಲ್ಲೆ ನಡೆಸಿದ ಪರಿಣಾಮ ಕೇರಳ ವಯನಾಡಿನ ಅಶ್ರಫ್ ಕೊಲೆಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 37/2025 ಕಲಂ: 189 (2), 191 (1) (3), 115 (2), 103 (2), 240, ಜತೆಗೆ 190 ಭಾರತೀಯ ನ್ಯಾಯ ಸಂಹಿತೆರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





