December 18, 2025

ಪೊಲೀಸ್ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ: ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಸಾವು

0
image_editor_output_image1343358435-1752232257647.jpg

ಯಾದಗರಿ: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಸಹ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ.

ಮಹೆಬೂಬ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೈಯದ್ ಅಲಿ (50) ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ತಂದೆ.

ಜಮೀನಿನಲ್ಲಿ ದಾರಿ ವಿಚಾರಕ್ಕೆ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬ ಹಾಗೂ ಮಹೆಬೂಬ್ ನಡುವೆ ಜಗಳ ಆಗಿತ್ತು. ಜಗಳ ಆದ ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರೆ ಬೇರೆ ಊರಿಂದ ಬಂದ ದಲಿತ ಮುಖಂಡರು ಜಾತಿ ನಿಂದನೆ ಕೇಸ್ ದಾಖಲು ಮಾಡಲು ಮುಂದಾಗಿದ್ದರು.

ಜಾತಿ ನಿಂದನೆ ಕೇಸ್ ದಾಖಲು ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಮಹೆಬೂಬ್‌ಗೆ ಬೆದರಿಕೆ ಹಾಕಿದ್ದರು. ಕೇಸ್ ದಾಖಲಾದರೆ ಮರ್ಯಾದೆ ಹೋಗುತ್ತದೆ. ಮತ್ತೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಮಹೆಬೂಬ್ ಹೆದರಿದ್ದ. ಇದೇ ಕಾರಣಕ್ಕೆ ಬುಧವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಮಗನ ಆತ್ಮಹತ್ಯೆ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ತಂದೆ ಸೈಯದ್ ಅಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೈಯದ್ ಅಲಿ ಸಾವನ್ನಪ್ಪಿದ್ದಾರೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!