March 13, 2026

ಕೇರಳದಿಂದ ಬಂದು ವಿಟ್ಲದಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕೆ.ವಿ.ರಾಜಮ್ಮ: ಲೇಖನ: ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ

0
IMG-20250701-WA0145

ವಿಟ್ಲದಲ್ಲಿ ಕೆ.ವಿ.ರಾಜಮ್ಮರನ್ನು ಅರಿಯದವರು ಯಾರೂ ಇರಲಾರರು. ಕಳೆದ 55 ವರ್ಷಗಳಿಂದ ವಿಟ್ಲದ ಪುತ್ತೂರು ರಸ್ತೆಯಲ್ಲಿ  ಪತ್ರಿಕಾ ಏಜೆನ್ಸಿಯಾಗಿರುವ ಇವರನ್ನು ವಿಟ್ಲದ ಜನತೆ ಕೇವಲ ಪತ್ರಿಕಾ ವ್ಯಾಪಾರಿಯಾಗಿ ನೋಡದೆ ತಮ್ಮ ಮನೆಯ ಓರ್ವ ಸದಸ್ಯೆಯಂತೆ ಕಾಣುತ್ತಿದ್ದಾರೆ.


ಅವರೇ ಹೇಳುವಂತೆ 1970ರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ  “ಕುನ್ನುಮ್ಮಲ್  ವಲಿಯ ವೀಟ್ಟಿಲ್ “ಎಂಬಲ್ಲಿಂದ ಶಿಕ್ಷಕಿಯಾಗುವ ಕನಸು ಹೊತ್ತು ವಿಟ್ಲಕ್ಕೆ ಕಾಲಿಟ್ಟ ರಾಜಮ್ಮನವರು ನೇಮಕಾತಿಯು ಸಂದರ್ಶನದಲ್ಲಿ ವಿಫಲರಾದರು. ಆ ಬಳಿಕ ವಿಟ್ಲದ ಜನತಾ ಬುಕ್ ಸ್ಟಾಲ್ ನಲ್ಲಿ ಗುಮಾಸ್ತೆಯಾಗಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.


ಶಿಕ್ಷಕಿಯಾಗುವ ಆಸೆಯನ್ನು ಕೈ ಬಿಟ್ಟು  1972 ರಲ್ಲಿ ಇಂದಿರಾ ಗಾಂಧಿಯವರ  ಯೋಜನೆಯೊಂದರ ಅನುದಾನದಲ್ಲಿ ಪುತ್ತೂರು ರಸ್ತೆಯ ಕಟ್ಟಡದ ಮಹಡಿಯಲ್ಲಿ ಟೈಪ್ ರೈಟಿಂಗ್ ಕೇಂದ್ರವನ್ನು ತೆರೆದರು. ವಿಟ್ಲದಲ್ಲಿ ಟೈಪ್ ರೈಟಿಂಗ್ ಕಲಿತವರಲ್ಲಿ ಬಹುತೇಕ ಮಂದಿ ರಾಜಮ್ಮನವರ ಶಿಷ್ಯರಾಗಿದ್ದಾರೆ ಎನ್ನುವುದು ವಿಶೇಷವಾಗಿದೆ.
ಟೈಪ್ ರೈಟರ್ ತರಬೇತಿ ಜೊತೆಗೆ ಪತ್ರಿಕೆ ವಿತರಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದರು.
  ಕ್ರಮೇಣ ಕಂಪ್ಯೂಟರ್ ಯುಗ ಪ್ರಾರಂಭವಾದಾಗ ಅನಿವಾರ್ಯವಾಗಿ ಟೈಪ್ ರೈಟಿಂಗ್ ಕೇಂದ್ರವನ್ನು ಮುಚ್ಚಬೇಕಾಯಿತು.


1984 ರಲ್ಲಿ ತನ್ನ ಪತ್ರಿಕಾ ವಿತರಣೆಯ ಅಂಗಡಿಯನ್ನು ಅದೇ   ರಸ್ತೆಯ ಕೆಳಗಿನ ಕಟ್ಟಡಕ್ಕೆ ಸ್ಥಳಾಂತರಿಸಿದರು.
ಪತ್ರಿಕೆ ಮಾರಾಟದ ಜೊತೆಗೆ ಕಂಪ್ಯೂಟರ್ ಮೂಲಕ ಜ್ಯೋತಿಷ್ಯ ಹೇಳುವುದು, ಜಾತಕ ಸಿದ್ಧಪಡಿಸಿ ಕೊಡುವುದು, ಶುಭ – ಅಶುಭ ದಿನಗಳ ಮಾಹಿತಿ ಕೊಡುವ ಮೂಲಕ ಜನಜನಿತರಾದರು.
ಕಳೆದ 20 ವರ್ಷಗಳಿಂದ ನಾನು ರಾಜಮ್ಮನವರ ಅಂಗಡಿಯ ಖಾಯಂ ಗ್ರಾಹಕನಾಗಿದ್ದೇನೆ. ಈ ಸಮಯದಲ್ಲಿ ಅವರು ನನ್ನ ಮೇಲೆ ತೋರಿದ ವಾತ್ಸಲ್ಯ, ಕಾಳಜಿಯನ್ನು ಎಂದೂ ಮರೆಯಲಾರೆ. ಮನೆಯಲ್ಲಿ ವಿಶೇಷ ತಿಂಡಿ ಮಾಡಿದರೆ ನನಗೆ ತಪ್ಪದೆ ನೀಡುತ್ತಿದ್ದಾರೆ. ಮನೆಯಲ್ಲಿ ಬೆಳೆದ ಹಣ್ಣು ಹಂಪಲುಗಳಲ್ಲಿ ನನಗೂ ಒಂದು ಪಾಲು ಕೊಡುತ್ತಿದ್ದರು. ಪತ್ರಿಕೆ ಖರೀದಿಸಲು ಅವರ ಅಂಗಡಿಗೆ ಹೋಗುವುದು ಒಂದು ದಿನ ತಪ್ಪಿದರೂ ಕಾರಣವನ್ನು ವಿಚಾರಿಸುತ್ತಿದ್ದರು. ಅನಾರೋಗ್ಯ ಎಂದು ಗೊತ್ತಾದರೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ ಅವರ ಮಾತೃ ಹೃದಯವನ್ನು ಮರೆಯಲಾಗದು.


ಮನೆಮದ್ದುಗಳ ಬಗ್ಗೆ ಅಪಾರ ಪಾಂಡಿತ್ಯ ಹೊಂದಿರುವ ಇವರು ಆಧ್ಯಾತ್ಮಿಕ ಚಿಂತನೆಯುಳ್ಳವರಾಗಿದ್ದಾರೆ.
ಮಾತೃಭಾಷೆ ಮಲಯಾಳಂ ಆದರೂ  ಇಲ್ಲಿನ  ಎಲ್ಲರನ್ನೂ ಪ್ರೀತಿಯಿಂದ ಕಂಡು, ವಿಟ್ಲದಲ್ಲಿ  ಕನ್ನಡದ ಕಂಪನ್ನು ಪಸರಿಸಿದ ರಾಜಮ್ಮ ಇದೀಗ ವಯೋಸಹಜ ಸಮಸ್ಯೆಯಿಂದ ಸ್ವಲ್ಪ ಮಂಕಾಗಿದ್ದಾರೆ.


ಇದೇ ಕಾರಣದಿಂದ ವಿಟ್ಲದಲ್ಲಿರುವ ಮನೆ ಹಾಗೂ ಅಂಗಡಿಯನ್ನು ಮಾರಿ ತನ್ನ ಮಾತೃಭೂಮಿಗೆ ಹಿಂದಿರುಗುವ ನಿರ್ಧಾರ ಮಾಡಿದ್ದಾರೆ.ವಿಟ್ಲವನ್ನು ಬಿಟ್ಟು ಹೋಗಲು ಮನಸ್ಸಿಲ್ಲ,ಆದರೂ ಅನಿವಾರ್ಯ ಎಂದು ಬೇಸರದಿಂದ ಹೇಳುತ್ತಾರೆ.
  ಎಲ್ಲರಿಗೂ ತನ್ನ ಪ್ರೀತಿಯನ್ನು ಧಾರೆ ಎರೆದು ಆತ್ಮೀಯರಾಗಿದ್ದ ರಾಜಮ್ಮರ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು  ವಿಟ್ಲದ  ಜನತೆಯ ಪರವಾಗಿ ಹೃದಯ  ತುಂಬಿ ಹಾರೈಸುತ್ತಿದ್ದೇನೆ.

Leave a Reply

Your email address will not be published. Required fields are marked *

error: Content is protected !!