December 15, 2025

ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪತಿ ವಿರುದ್ಧವೇ ಪ್ರಕರಣ ದಾಖಲಿಸಿ‌ ಬಂಧನ: ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

0
image_editor_output_image-730595468-1751079842083.jpg

ಮೈಸೂರು: ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪತಿ ಸುರೇಶ್ ವಿರುದ್ಧವೇ ಪತ್ನಿಯ ಕೊಲೆ ಆರೋಪ ಪ್ರಕರಣ ದಾಖಲಿಸಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಮೈಸೂರಿನ ಇಲವಾಲ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹೇಶ್‌ಕುಮಾರ್ ಹಾಗೂ ಜಯಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ಅವರನ್ನು ಅಮಾನತುಗೊಳಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಚೆಗೆ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತಾಪಿಸಿ, ಸುರೇಶ್ ಅವರು ಎರಡು ವರ್ಷ ಜೈಲು ವಾಸ ಅನುಭವಿಸುವಂತೆ ಮಾಡಿದ್ದ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದರು.

ಪ್ರಕರಣದ ಹಿನ್ನೆಲೆ:
2020ರ ನವೆಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ಸುರೇಶ್ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್ ಎಂಬಾತನೇ ಕಾರಣ ಎಂದು ತಿಳಿಸಿದ್ದರೂ, ಬೆಟ್ಟದಪುರದ ಪೊಲೀಸರು ಸುರೇಶ್ ಅವರನ್ನೇ ಆರೋಪಿಯಾಗಿಸಿ, ಬಂಧಿಸಿದ್ದರು. ಸುರೇಶ್ ಎರಡು ವರ್ಷ ಜೈಲಿನಲ್ಲಿದ್ದು ವಿಚಾರಣೆ ಎದುರಿಸುವಾಗಲೇ, ಸುರೇಶ್ ಪತ್ನಿ ಮಲ್ಲಿಗೆ ತನ್ನ ಪ್ರಿಯಕರನೊಂದಿಗೆ ಪತ್ತೆ ಆಗಿದ್ದರು.

‘ಜೇನುಕುರುಬ’ ಆದಿವಾಸಿ ಸಮುದಾಯದ ಕುಟುಂಬವಾದ್ದರಿಂದ ಮುಂದೆ ನಮಗೇನು ಸಮಸ್ಯೆ ಆಗುವುದಿಲ್ಲ ಎಂದು ಭಾವಿಸಿದ್ದ ಪೊಲೀಸ್ ಅಧಿಕಾರಿಗಳು, ಪ್ರಕರಣದುದ್ದಕ್ಕೂ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಸುರೇಶ್ ಅವರನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು. ಸುರೇಶ್ ಮೇಲಿನ ಸುಳ್ಳು ಆರೋಪ ಪ್ರಕರಣದ ತನಿಖೆಯ ಹಂತದಲ್ಲಿದ್ದಾಗ, ಬಿ.ಜಿ.ಪ್ರಕಾಶ್ ಬೈಲುಕುಪ್ಪೆಯ ಸರ್ಕಲ್ ಇನ್‌ಸ್ಪೆಕ್ಟರ್, ಮಹೇಶ್ ಕುಮಾರ್ ಹಾಗೂ ಪ್ರಕಾಶ್ ಎತ್ತಿನಮನಿ ಬೆಟ್ಟದಪುರ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!