ಲುಧಿಯಾನ ಕೋರ್ಟ್ ಆವರಣದಲ್ಲಿ ಸ್ಪೋಟ: ಇಬ್ಬರು ಮೃತ್ಯು
ಲುಧಿಯಾನಾ: ಪಂಜಾಬ್‌ನ ಲುಧಿಯಾನಾ ನಗರದಲ್ಲಿರುವ ನ್ಯಾಯಾಲಯವೊಂದರ ಸಂಕೀರ್ಣದಲ್ಲಿ ಇಂದು ಸ್ಫೋಟ ಉಂಟಾಗಿದ್ದು, ಮಹಿಳೆ ಸೇರಿ, ಇಬ್ಬರು ಮೃತಪಟ್ಟಿದ್ದಾರೆ.
ಸ್ಫೋಟದಲ್ಲಿ ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಕೋರ್ಟ್‌ನ ಎರಡನೇ ಮಹಡಿಯಲ್ಲಿ ಸ್ಫೋಟವಾಗಿದೆ. ಹಾಗೇ, ಕೆಳಗೆ ವಾಹನ ನಿಲುಗಡೆ ಜಾಗವೂ ಧ್ವಂಸಗೊಂಡಿದೆ. ಅಲ್ಲಿ ಹಾಕಿದ್ದ ಇಟ್ಟಿಗೆ, ಕಬ್ಬಿಣದ ಕಂಬಗಳು ಬಿದ್ದಿವೆ ಎಂದು ವರದಿಯಾಗಿದೆ. ಇದು ಆರು ಮಹಡಿಗಳ ಕಟ್ಟಡವಾಗಿದ್ದು, ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟವುಂಟಾಗಿದ್ದು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ.
ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಅಪಾರ ಜನರು ಸೇರಿದ್ದಾರೆ. ಕಟ್ಟಡದಿಂದ ಹೊಗೆ ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೊಂದು ಪ್ರಬಲ ಸ್ಫೋಟವಾಗಿದ್ದು, ಸ್ಫೋಟದ ರಭಸಕ್ಕೆ ಇಡೀ ಕಟ್ಟಡ ನಲುಗಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 9ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಸಣ್ಣ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಕೋರ್ಟ್ ಆವರಣದಲ್ಲಿ ಉಂಟಾದ ಸ್ಫೋಟದಿಂದಾಗಿ ಅಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸದ್ಯ ಈ ಪ್ರಕರಣದ ಆರೋಪಿ ಡಿಆರ್ಡಿಒ ವಿಜ್ಞಾನಿಯಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ತಮ್ಮ ನೆರೆಮನೆಯ ವಕೀಲರೊಬ್ಬರ ಮೇಲಿನ ಸೇಡಿಗೆ, ಕೋರ್ಟ್ ಆವರಣದಲ್ಲಿ ಟಿಫಿನ್ ಬಾಕ್ಸ್ ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದರು. ಸದ್ಯ ಅವರು ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿಯೇ ಹ್ಯಾಂಡ್ ವಾಶ್ ದ್ರವ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು.





